ಬೆಂಗಳೂರು :ಹಿಂದುಳಿದ, ದಲಿತ ಮಠಾಧೀಶರ ನಿಯೋಗ ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದೆ. ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಯಾದಾಗ 27 ಸಮಿತಿಗಳಿದ್ದು, 172 ಜನ ವಿಷಯ ತಜ್ಞರು ಅಧ್ಯಾಪಕರು ಈ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆಂದು ಕೇಳಿದ್ದೇವೆ. ಆದರೆ, ಮರು ಪರಿಷ್ಕರಣೆಗೆ ಹತ್ತಾರು ಜನರ ಒಂದೇ ಸಮಿತಿಯನ್ನು ನೇಮಿಸಿದ್ದು, ಅದರಲ್ಲಿ ಒಬ್ಬರ ಹೊರತಾಗಿ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದವರೆಂದು ತಿಳಿದು ಬಂದಿದೆ. ಹಾಗಾಗಿ, ಇದು ಅನುಚಿತ ಎಂದು ನೇರವಾಗಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಮರು ಪರಿಷ್ಕರಣೆ ಮಾಡುವಾಗ ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ. ಕನ್ನಡ ಭಾಷಾ ಪಠ್ಯಗಳಿಂದ ಎಲ್ಲಾ ಹಿಂದುಳಿದ, ದಲಿತ ಬರಹಗಾರರ ಪಾಠಗಳನ್ನು ತೆಗೆಯಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ 10 ಪಾಠ ಹಾಕಿದ್ದು, ಸಂತೋಷದ ಸಂಗತಿಯಾಗಿದೆ. ಆದರೆ, ಹೀಗೆ ಮಾಡುವಾಗ ಹಿಂದುಳಿದ, ದಲಿತ ಬರಹಗಾರರ ಪಾಠಗಳಿಗೆ ಬದಲಾಗಿ ಕುವೆಂಪು ಪಾಠ ಹಾಕಲಾಗಿದೆ. ಕುವೆಂಪುರವರ ಬದುಕಿದ್ದರೆ ಅವರೇ ಇದನ್ನು ಒಪ್ಪುತ್ತಿರಲಿಲ್ಲ ಎಂದಿದ್ದಾರೆ.
ದಲಿತ ಸಾಧಕರಿಗೆ ಅನ್ಯಾಯ : ಡಾ.ಅಂಬೇಡ್ಕರ್ ಮತ್ತು ಬುದ್ದ ಗುರುವಿನ ಬಗ್ಗೆ ಇದ್ದ ಕನ್ನಡ ಪದ್ಯಗಳನ್ನು ಕಿತ್ತು ಹಾಕಲಾಗಿದ್ದು, ಇದು ಸರಿಯಲ್ಲ. ಸಮಾಜ ವಿಜ್ಞಾನ ಪಠ್ಯಗಳಲ್ಲಿ ಹಿಂದುಳಿದ ಮತ್ತು ದಲಿತ ಸಾಧಕರಿಗೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಈ ಅನ್ಯಾಯವು ಡಾ. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಎಂಬ ಕೀರ್ತಿಯಲ್ಲಿ ತೆಗೆಯುವುದರಿಂದ ಆರಂಭವಾಗಿದೆ ಎಂದು ನೇರವಾಗಿ ರೋಹಿತ್ ಚಕ್ರತೀರ್ಥ ಸಮಿತಿಯ ಕಾರ್ಯವೈಖರಿಯನ್ನು ಖಂಡಿಸಿದರು.