ಬೆಂಗಳೂರು :ಕೊರೊನಾ ಸೋಂಕು ಹರಡಲು ಆರಂಭವಾದಾಗಿನಿಂದ ಉದ್ಯೋಗ ನಷ್ಟ, ಕೌಟುಂಬಿಕ ಕಲಹ, ವಲಸೆ, ಹಿಂಸಾಚಾರ ಹೀಗೆ ನಾನಾ ಕಾರಣಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸಕಾರಾತ್ಮಕ ಭಾವನೆ ಹೆಚ್ಚಿಸುವ ಕೆಲಸ ಆಗಬೇಕು ಎಂದು ನಿಮ್ಹಾನ್ಸ್ ವೈದ್ಯರು ಅಭಿಮತ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಈ ವರ್ಷ ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ ನಿಮ್ಹಾನ್ಸ್ನಿಂದ ಒಂದು ತಿಂಗಳ ಕಾಲ ಅಭಿಯಾನವನ್ನು ಆಯೋಜಿಸಲು ತೀರ್ಮಾನಿಸಿದೆ. ಕ್ರಿಯೆಯ ಮೂಲಕ ಭರವಸೆಯನ್ನು ಮೂಡಿಸುವುದು ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಕಾರ್ಯಕ್ರಮವನ್ನು ನಡೆಸಲಾಗ್ತಿದೆ.