ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಮೌನ ಮುರಿದಿರುವ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ ದತ್ತಾ, ಈ ಜಾಗದಲ್ಲಿ ವಿಶ್ವನಾಥ್ ಅವರೇ ಮುಂದುವರಿಯಬೇಕು. ದೇವೇಗೌಡರ ಮೊಮ್ಮಕ್ಕಳಾದ ನಿಖಿಲ್ ಹಾಗೂ ಪ್ರಜ್ವಲ್ ತೆರೆಯ ಹಿಂದೆಯೇ ಇರಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಇಬ್ಬರೂ ಈಗಾಗಲೇ ಪ್ರಜ್ವಲಿಸುತ್ತಿದ್ದಾರೆ. ಹೀಗಾಗಿ ಅವರು ಯುವ ಘಟಕದ ಅಧ್ಯಕ್ಷ ಸ್ಥಾನವೂ ಸೇರಿದಂತೆ ಬೇರೆ ಯಾವ ಸ್ಥಾನಗಳ ಕಡೆಗೂ ನೋಡದೆ ತೆರೆ ಮರೆಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.
ನಿಖಿಲ್ ಹಾಗೂ ಪ್ರಜ್ವಲ್ ಇಬ್ಬರೂ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ ಎಂದ ಅವರು, ಯುವ ಘಟಕದ ಅಧ್ಯಕ್ಷ ಸ್ಥಾನವೇ ಇರಲಿ, ಇನ್ನೇನೇ ಸ್ಥಾನವಿರಲಿ ಬೇರೆಯವರಿಗೆ ಅವರು ಅವಕಾಶ ಮಾಡಿಕೊಡುವುದು ಒಳ್ಳೆಯದು ಎಂದರು. ವಿಶ್ವನಾಥ್ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಉತ್ತಮ. ಅವರ ಮಾರ್ಗದರ್ಶನದಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಹಾಗೆಯೇ ಮುಂದುವರೆಯುವುದು ಒಳ್ಳೆಯದು ಎಂದು ಹೇಳಿದರು.
ಹೆಚ್.ಡಿ. ದೇವೇಗೌಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಲ್ಲಿ ವಿಶ್ವನಾಥ್ ಅವರು ಅಧ್ಯಕ್ಷರಾಗಿದ್ದಾರೆ. ಬದಲಾದ ರಾಜಕೀಯ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ತಾವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.