ಬೆಂಗಳೂರು: ಇಲ್ಲಿಯವರೆಗೂ ಒಂದು ರೀತಿಯ ರಾಜಕಾರಣ ನಡೆಯಿತು. ಇನ್ನು ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕಗಳ ಸಂಘಟನಾ ಸಭೆಯಲ್ಲಿ ನಿಖಿಲ್ ಮಾತನಾಡಿದ್ರು. ಪಕ್ಷದ ಯಾರೊಬ್ಬರೂ ನಿರುತ್ಸಾಹಿಗಳಾಗದೆ ಕೆಲಸ ಮಾಡಿ ಎಂದ್ರು. ಮುಂಬರುವ ಚುನಾವಣೆಗಳಲ್ಲಿ ಯುವಕರಿಗೆ ಆದ್ಯತೆ ಇರಲಿದೆ. ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಿ ಪಕ್ಷ ಸಂಘಟಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ಪ್ರತಿ ಜಿಲ್ಲೆಗೆ ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ ಎಂದರು.
ಜೆಡಿಎಸ್ ಪಕ್ಷದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ. ಯಾವುದೇ ಕಾರಣಕ್ಕೂ ಪಕ್ಷವನ್ನು ವಿಲೀನ ಮಾಡುವ ಸಂದರ್ಭ ಬರುವುದಿಲ್ಲ. ಯಾವ ಪಕ್ಷದ ಜೊತೆಗೂ ನಮ್ಮ ಪಕ್ಷವನ್ನು ವಿಲೀನ ಮಾಡುವುದಿಲ್ಲ. ಇದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಯಾರೂ ಉತ್ಸಾಹ ಕಳೆದುಕೊಳ್ಳಬೇಡಿ. ನಾವು ನಿಮ್ಮ ಜೊತೆ ಇದ್ದೇವೆ. ತಳಮಟ್ಟದಲ್ಲಿ ಪಕ್ಷ ಸಾಕಷ್ಟು ಸದೃಢವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯೇ ಇದಕ್ಕೆ ಸಾಕ್ಷಿ ಎಂದರು.
2023ರ ಸಾರ್ವತ್ರಿಕ ಚುನಾವಣೆ, ತಾಲೂಕುಮಟ್ಟದ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆಗೆ ಅತಿ ಹೆಚ್ಚು ಆದ್ಯತೆ ನೀಡುತ್ತೇನೆ. ಪಕ್ಷ ಒಂದು ಜವಾಬ್ದಾರಿ ನೀಡಿದೆ. ಒಂದು ದಿನ ಬೆಳಗ್ಗೆ ದೇವೇಗೌಡರ ಪಿಎ ಅಂಜನಗೌಡರು ಫೋನ್ ಮಾಡಿ ತಕ್ಷಣ ಪಕ್ಷದ ಕಚೇರಿಗೆ ಬನ್ನಿ ಎಂದು ಹೇಳಿದ್ರು, ಬಂದೆ. ವಿದ್ಯಾರ್ಥಿ ಘಟಕದ ಅಧ್ಯಕ್ಷನನ್ನಾಗಿ ಮಾಡಿದರು. ಕುಮಾರಸ್ವಾಮಿ ಅವರ ಹಾಗೆ ನಾನು ತಾಳ್ಮೆಯಿಂದ ವರ್ತನೆ ಮಾಡುತ್ತೇನೆ ಎಂದರು.