ಬೆಂಗಳೂರು: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಿಂದ ಸಮರ್ಥ ದೇಶ ನಿರ್ಮಾಣ ಸಾಧ್ಯ. ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹೆಚ್.ಎಂ.ಟಿ ಮೈದಾನದಲ್ಲಿ ಇಂದು ಆಯೋಜಿಸಿದ್ದ ಹೆಬ್ಬಾಳ ಚಿಣ್ಣರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಈ ಕನ್ನಡ ಹಬ್ಬವನ್ನು ಜೆಡಿಎಸ್ ಅಭ್ಯರ್ಥಿ ಡಾ.ಸೈಯದ್ ಅಲ್ತಾಫ್ ಅತ್ಯುತ್ತಮವಾಗಿ ಆಯೋಜಿಸಿದ್ದಾರೆ. 35 ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಾರೆ.
ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಮಕ್ಕಳು ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಬೇಕು. ಅವರ ಸರ್ವತೋಮುಖ ಅಭಿವೃದ್ದಿಯಿಂದ ಸಮರ್ಥ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಐಟಿ ಬಿಟಿಗಳಲ್ಲಿ ಹೊರ ರಾಜ್ಯದವರಿಗೆ ಸಿಗುವ ಮಾನ್ಯತೆ ಕನ್ನಡಿಗರಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಯುವಕರಿಗೆ ಅದರಲ್ಲೂ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ದೊರೆಯಬೇಕು. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಬೇಕು. ಕನ್ನಡಿಗರ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ. ಒಂದು ಬಾರಿ ಕುಮಾರಣ್ಣನಿಗೆ ಐದು ವರ್ಷ ಕಾಲ ಅಧಿಕಾರ ಕೊಟ್ಟು ನೋಡಿ, ನಿರುದ್ಯೋಗ ಸಮಸ್ಯೆ ದೂರಮಾಡುವುದು ಖಂಡಿತ. ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವಂತಹ ನಾಯಕತ್ವದ ಕೊರತೆಯನ್ನು ನಾವು ನೀಗಿಸುತ್ತೇವೆ ಎಂದು ಹೇಳಿದರು.