ಬೆಂಗಳೂರು:ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಬರುತ್ತಿದೆ. 2023ರ ಸಾರ್ವತ್ರಿಕ ಚುನಾವಣೆಗೆ ನಾವು ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದು ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಯುವ ಘಟಕಗಳ ಸಂಘಟನಾ ಸಭೆಗೂ ಮುನ್ನ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಾನು ಸೇರಿದಂತೆ ಒಂದು ಯುವ ಪಡೆ ಕಟ್ಟಬೇಕಿದೆ. ನಮ್ಮ ಕೈಯಲ್ಲಿ ಆದಂತಹ ಪ್ರಯತ್ನ ನಾವು ಮಾಡುತ್ತೇವೆ ಎಂದರು.
ರಾಜ್ಯದ 30 ಜಿಲ್ಲೆಗಳಿಂದ ಜೆಡಿಎಸ್ ಯುವ ನಾಯಕರ ಜೊತೆ ಸಭೆ ಮಾಡುತ್ತಿದ್ದೇವೆ. ಸಾಕಷ್ಟು ವಿಚಾರಗಳು ಮುಕ್ತವಾಗಿ ಚರ್ಚೆ ಮಾಡಬೇಕಿದೆ. ಈಗಷ್ಟೇ ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದೆ ಎಂದು ಹೇಳಿದರು.
ಜೆಡಿಎಸ್ ವಿಲೀನ ಬಗ್ಗೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಜೆಡಿಎಸ್ಗೆ ವಿಲೀನ ಆಗುವ ಅನಿವಾರ್ಯತೆ ಇಲ್ಲ. ಆ ರೀತಿಯ ಪರಿಸ್ಥಿತಿ ನಮಗೆ ಬಂದಿಲ್ಲ, ಬರೋದು ಇಲ್ಲ. ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ. ಜೆಡಿಎಸ್ ಪಕ್ಷವನ್ನ ನಂಬಿಕೊಂಡಿರುವವರು ಇದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪಗಳಿಗೆ ನಾನು ಮಾತನಾಡಲ್ಲ. ನಮ್ಮ ತಂದೆಯವರು ಅವರ ಆರೋಪಗಳಿಗೆ ಉತ್ತರಿಸುತ್ತಾರೆ ಎಂದಷ್ಟೇ ಹೇಳಿ ಸಭೆಗೆ ತೆರಳಿದರು.