ಬೆಂಗಳೂರು:ಮುಂಬರುವ 2024ರ ಲೋಕಸಭೆ ಚುನಾವಣೆಗೆ ಇದಾಗಲೇ ಪಕ್ಷಗಳು ಕಸರತ್ತು ನಡೆಸುತ್ತಿದೆ. ನಿಮಗೆ ತಿಳಿದಿರುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ 2023 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಆದರೆ ಇದೀಗ ಲೋಕಸಭೆ ಎಲೆಕ್ಷನ್ ಗುರಿ ಸಾಧಿಸಲು ನಿಖಿಲ್ ಪಣ ತೊಟ್ಟಿದ್ದಾರೆ.
ಹೌದು, ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ನಿಖಿಲ್ ಕುಮಾರಸ್ವಾಮಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ. ಇವರ ಭೇಟಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆ ಹಿನ್ನೆಲೆ ಚುರುಕುಗೊಂಡಿರುವ ನಾಯಕ ನಟ ಈ ಹಿಂದೆ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇಂದು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ರಾಜಕೀಯ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಭೇಟಿ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಸಿಎಂ ಆದಿತ್ಯನಾಥ್ ಅವರಿಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನಿರುವ ಒಂದು ವಿಗ್ರಹ ನೀಡಿ ಶಾಲು ಹೋದಿಸಿ ಗೌರವಿಸಿದ್ದಾರೆ.
ಈ ಕುರಿತು ಸ್ವತಃ ನಿಖಿಲ್ ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಭೇಟಿ ಕುರಿತು ಬರೆದಿಕೊಂಡಿರುವ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಎಕ್ಸ್ ಪೋಸ್ಟ್ ಹೀಗಿದೆ: "ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಅವರು ಹಂಚಿಕೊಂಡರು. ಅವರು ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ನನ್ನನ್ನು ಬರಮಾಡಿಕೊಂಡು ಆಶೀರ್ವದಿಸಿದರು. ಪ್ರೀತಿಯಿಂದ ಸತ್ಕರಿಸಿದ ನಿಮಗೆ ಧನ್ಯವಾದಗಳು ಯೋಗಿ ಜೀ" ಎಂದು ಬರೆದುಕೊಂಡಿದ್ದಾರೆ.
ಇನ್ನು ಬಿಜೆಪಿಯೊಂದಿಗೆ ಮೈತ್ರಿಯಾದಾಗಿನಿಂದ ಪಕ್ಷದ ನಾಯಕರು ಬಿಜೆಪಿಯ ದೊಡ್ಡ ದೊಡ್ಡ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದು, ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಚುನಾವಣೆಗೆ ಫುಲ್ ಆಕ್ಟಿವ್ ಆಗಿದ್ದಾರೆ. ಕಳೆದ ಸೆಪ್ಟೆಂಬರ್ 22 ರಂದು ಜೆಡಿಎಸ್ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಗೆ ಸೇರ್ಪಡೆಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯನ್ನು ಖಚಿತಪಡಿಸಿದ್ದರು. ಈ ಮೈತ್ರಿ ಸಭೆಯಲ್ಲಿ ಅಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಒಟ್ಟಾರೆ ಎಲೆಕ್ಷನ್ ಹಿನ್ನೆಲೆ ಒಂದಾಗಿರುವ ಬಿಜೆಪಿ - ಜೆಡಿಎಸ್ ಲೋಕಸಭೆ ಚುನಾವಣೆಗೆ ಜೋರಾಗಿಯೇ ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ:ಬಿಜೆಪಿಯವರು 2500 ಎಂಎಲ್ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್ ಲಾಡ್