ಬೆಂಗಳೂರು :ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ ಎಂದು ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಸ್ಪಷ್ಟನೆ ನೀಡಿರುವ ಅವರು, ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ ಎಂದು ಹೇಳಿದ್ದಾರೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ಗೆ 14 ದಿನ ನ್ಯಾಯಾಂಗ ಬಂಧನ
ಹುಲಿ ಉಗುರಿನ ಡಾಲರ್ ಧರಿಸಿದ್ದ ವರ್ತೂರು ಸಂತೋಷ್ ಅರೆಸ್ಟ್: ಹುಲಿ ಉಗುರಿನ ಡಾಲರ್ ಧರಿಸಿದ್ದ ಆರೋಪದ ಮೇಲೆ ಮೂರು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯವು ಸಂತೋಷ್ಗೆ 14 ದಿನಗಳ (ನವೆಂಬರ್ 6 ವರೆಗೆ) ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಸಂತೋಷ್ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ವ್ಯಕ್ತಿಯೊಬ್ಬರು ದೂರು ನೀಡಿದ ಆಧಾರದ ಮೇರೆಗೆ ಬಿಗ್‌ಬಾಸ್ ಮನೆಗೆ ಭಾನುವಾರ ರಾತ್ರಿ ತೆರಳಿದ್ದ ಅರಣ್ಯಾಧಿಕಾರಿಗಳು ಸಂತೋಷ್ ಬಂಧನ ಮಾಡಿದ್ದರು. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಸಂತೋಷ್ ಪರ ವಕೀಲ ನಟರಾಜ್ ಅವರು, ಪ್ರಕರಣ ಸಂಬಂಧ ಜಾಮೀನು ಅರ್ಜಿ ಹಾಕಲಾಗಿದೆ. ಈ ಅರ್ಜಿಗೆ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸಂತೋಷ್ ಧರಿಸಿರುವುದು ಹುಲಿಯ ಉಗುರು ಎಂದು ಹೇಳುತ್ತಿದ್ದಾರೆ. ಆದರೆ ತಜ್ಞರ ಪರಿಶೀಲನಾ ವರದಿ ಬಂದ ಬಳಿಕ ನಿಜಾಂಶ ಗೊತ್ತಾಗಲಿದೆ ಎಂದಿದ್ದರು.
ಚಿಕ್ಕಮಗಳೂರಲ್ಲಿ ಇಬ್ಬರ ಬಂಧನ:ಇನ್ನೊಂದು ಪ್ರಕರಣದಲ್ಲಿ, ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಬಿ.ಹೊಸಳ್ಳಿಯ ಕುಂಡ್ರ ನಿವಾಸಿ ಸತೀಶ್ ಮತ್ತು ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ಬಂಧಿತ ಆರೋಪಿಗಳು. ಹುಲಿ ಉಗುರು ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.