ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಗೊಂಡ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಇಂದಿನಿಂದ ಜನವರಿ 2ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನ್ಯೂ ಇಯರ್ ಪಾರ್ಟಿ ಇರಲ್ಲ: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ
12:48 December 23
ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸುಧಾಕರ್ ಜೊತೆ ಸಿಎಂ ಯಡಿಯೂರಪ್ಪ ಸಭೆ: ಕೋವಿಡ್ ಸಲಹಾ ಸಮಿತಿ ಶಿಫಾರಸುಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು. ನಂತರ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸುವ ಶಿಫಾರಸಿಗೆ ಸಮ್ಮತಿ ನೀಡಿ ಇಂದಿನಿಂದಲೇ ನೈಟ್ ಕರ್ಫ್ಯೂಗೆ ಆದೇಶ ನೀಡಿದ್ದಾರೆ.
ಸಭೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಕೋವಿಡ್ ಸಲಹಾ ಸಮಿತಿ ಶಿಫಾರಸು ಪ್ರಕಾರ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6ರ ತನಕ ಜನರು ಮನೆಯಿಂದ ಹೊರಬರುವಂತಿಲ್ಲ. ಆದರೆ ತುರ್ತು ಸೇವೆಗೆ ವಿನಾಯಿತಿ ಇದೆ. ಜನವರಿ 2 ರವರೆಗೆ ಈ ಆದೇಶ ಜಾರಿ ಜಾರಿಯಲ್ಲಿರುತ್ತದೆ. ಈ ವೇಳೆ ಅಗತ್ಯ ಸೇವೆ ಬಿಟ್ಟು ಬೇರೆಲ್ಲವೂ ಬಂದ್ ಇರಲಿದೆ. ವಾಹನ ಸಂಚಾರ ಮತ್ತು ಜನ ಸಂಚಾರವೂ ಇರುವುದಿಲ್ಲ. ಸರ್ಕಾರದ ಜತೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭ: ಈಗಾಗಲೇ ನಿಗದಿಯಾಗಿರುವಂತೆ ಶಾಲಾ-ಕಾಲೇಜು ಜನವರಿ 1 ರಿಂದ ಆರಂಭವಾಗಲಿದೆ. ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಬೆಳವಣಿಗೆ ನೋಡಿ ನಿರ್ಧಾರ ಪರಿಶೀಲನೆ ಮಾಡಲಿದ್ದೇವೆ ಎಂದಿದ್ದಾರೆ.
ಸಂಜೆ ಗೈಡ್ಲೈನ್: ನೈಟ್ ಕರ್ಫ್ಯೂ ಬಗ್ಗೆ ಇಂದು ಸಂಜೆ ಮಾರ್ಗಸೂಚಿ ಬಿಡುಗಡೆಗೊಳಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.