ಬೆಂಗಳೂರು: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಶೇಖರಿಸಿಟ್ಟಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಬಂಧಿಸಿದೆ. ನೈಜೀರಿಯಾ ಮೂಲದ ಲಿಯೋನಾರ್ಡ್ ಒಕ್ವುಡಿಲಿ (44) ಬಂಧಿತ ಆರೋಪಿ. ಈತನಿಂದ 16 ಕೆ.ಜಿ ಮಾದಕ ಪದಾರ್ಥ, 500 ಗ್ರಾಂ ತೂಕದ ಕೊಕೇನ್ ಹಾಗೂ 1 ಮೊಬೈಲ್ ಹಾಗೂ ಇತರೆ ವಸ್ತುಗಳು ಸೇರಿ ಅಂದಾಜು 21 ಕೋಟಿ ರೂ. ಬೆಲೆ ಬಾಳುವ ಡ್ರಗ್ಸ್ ವಶಕ್ಕೆ ಪಡೆದಿದೆ.
ವಿದೇಶಿ ಪ್ರಜೆಯಾಗಿರುವ ಆರೋಪಿಯು ಒಂದು ವರ್ಷದ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. 2024ರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಿಗೆ ನಿಷೇಧಿತ ಡ್ರಗ್ಸ್ ಮತ್ತು ಕೊಕೇನ್ ಅನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದೆಹಲಿ, ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳಿಂದ ಚೂಡಿದಾರ್ ಬಟ್ಟೆ, ಬೆಡ್‌ಶೀಟ್ ಕವರ್‌ಗಳಲ್ಲಿ, ಸೋಪ್ ಬಾಕ್ಸ್ ಮತ್ತು ಚಾಕೊಲೇಟ್ ಬಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ಅಡಗಿಸಿ ಯಾರಿಗೂ ಅನುಮಾನ ಬರದಂತೆ ಖರೀದಿಸಿಕೊಂಡು ತರುತ್ತಿದ್ದ ಮತ್ತು ಅವುಗಳನ್ನು ತನ್ನ ಮನೆಯಲ್ಲಿರಿಸಿಕೊಂಡಿದ್ದ.