ಕರ್ನಾಟಕ

karnataka

ETV Bharat / state

2005ರ IISC ಉಗ್ರರ ದಾಳಿ ಪ್ರಕರಣ : ತ್ರಿಪುರ ಮೂಲದ ಆರೋಪಿ ಖುಲಾಸೆ - auto driver Habib Mohammed case

4 ವರ್ಷಗಳ ಹಿಂದೆ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿ ಮೊಹಮ್ಮದ್ ಹಬೀಬ್ ತನ್ನನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿ ಸಿಆರ್ಪಿಸಿ ಸೆಕ್ಷನ್ 227ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಇಲ್ಲಿನ ವಿಶೇಷ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿ ಆದೇಶಿಸಿದೆ.

ವಿಶೇಷ ನ್ಯಾಯಾಲಯ
ವಿಶೇಷ ನ್ಯಾಯಾಲಯ

By

Published : Jun 21, 2021, 6:17 PM IST

ಬೆಂಗಳೂರು :2005ರಲ್ಲಿ ನಗರದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್​ಸಿ)ಯಲ್ಲಿ ನಡೆದಿದ್ದ ಉಗ್ರಗಾಮಿಗಳಿಂದ ಶೂಟೌಟ್ ಪ್ರಕರಣದಲ್ಲಿ ಬಂಧಿತನಾಗಿದ್ದ ತ್ರಿಪುರ ಮೂಲದ ಆರೋಪಿ ಮೊಹಮ್ಮದ್ ಹಬೀಬ್ ಎಂಬಾತನನ್ನು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿ ಆದೇಶಿಸಿದೆ. ಆರೋಪಿತ ವ್ಯಕ್ತಿ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಆರೋಪಿಯನ್ನು ಬಿಡುಗಡೆ ಮಾಡುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಆದೇಶಿಸಿದ್ದಾರೆ.

ನ್ಯಾಯಾಲಯ ತನ್ನ ಆದೇಶದಲ್ಲಿ, ಪ್ರಕರಣದಲ್ಲಿ 7ನೇ ಆರೋಪಿಯಾಗಿರುವ ಹಬೀಬ್​ನನ್ನು ಪೊಲೀಸರು ಮೊದಲನೇ ಆರೋಪಿಯಾದ ಶಹಾಬುದ್ದೀನ್ ಅಹ್ಮದ್ ಹೇಳಿಕೆ ಆಧರಿಸಿ ಬಂಧಿಸಿದ್ದಾರೆ. ಶಹಾಬುದ್ದೀನ್ 2008ರಲ್ಲಿ ಪೊಲೀಸರಿಗೆ ನೀಡಿದ ಹೇಳಿಕೆಗಳಲ್ಲಿ ಆತ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ್ದ ವೇಳೆ ತ್ರಿಪುರ ರಾಜ್ಯದ ಅಗರ್ತಲಕ್ಕೆ ತೆರಳಿ ಅಲ್ಲಿ ಹಬೀಬ್​ನನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾನೆ. ಅದೇ ರೀತಿ ಶಹಾಬುದ್ದೀನ್ ಸಾಕಷ್ಟು ಜನರನ್ನು ಭೇಟಿಯಾಗಿರುವುದಾಗಿ, ಅವರಿಂದ ಊಟೋಪಚಾರ, ಉಳಿದುಕೊಳ್ಳಲು ವ್ಯವಸ್ಥೆ ಪಡೆದುಕೊಂಡಿದ್ದಾಗಿ ತಿಳಿಸಿದ್ದಾನೆ. ಆದರೆ, ಎಲ್ಲಿಯೂ ತಾನು ಬಾಂಗ್ಲಾಗೆ ಹೋಗುತ್ತಿರುವ ಉದ್ದೇಶದ ಕುರಿತು ಯಾರಿಗೂ ತಿಳಿಸಿರಲಿಲ್ಲವೆಂದು ತಪ್ಪೊಪ್ಪಿಗೆ ವೇಳೆ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಭೀಮಾತೀರದ ಶೂಟೌಟ್​ ಪ್ರಕರಣ: ತಲೆಮರೆಸಿಕೊಂಡವರ ಜಾಡು ಪತ್ತೆಗಿಳಿದ ಪೊಲೀಸರು

ಆ ಬಳಿಕ ಪ್ರಕರಣವೊಂದರಲ್ಲಿ ಲಕ್ನೊ ಪೊಲೀಸರು ಹಬೀಬ್​ನನ್ನು ಬಂಧಿಸಿದ ಬಳಿಕ ರಾಜ್ಯ ಪೊಲೀಸರು 2017ರಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಆರೋಪಿತನ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಯೋಜನೆ ಹೊಂದಿದ್ದ ಎಂದಿದ್ದಾರೆ. ಆದರೆ. ಯಾವುದಕ್ಕೂ ಸೂಕ್ತ ಸಾಕ್ಷ್ಯಗಳನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಆರೋಪಿ ಮೊಹಮ್ಮದ್ ಹಬೀಬ್​ನನ್ನು ಪ್ರಕರಣದಿಂದ ಬಿಡುಗಡೆ ಮಾಡಿದೆ.

ಪ್ರಕರಣದ ಹಿನ್ನೆಲೆ

2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೂಟೌಟ್ ಪ್ರಕರಣ ನಡೆದಿತ್ತು. ಈ ವೇಳೆ ಒಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಸದಾಶಿವನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು.

ಅದರಂತೆ, ಎನ್ಐಎ ಅಧಿಕಾರಿಗಳು ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120(ಬಿ), 121, 121(ಎ). 122, 123, 307, 302, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25, 27 ಸ್ಫೋಟಕ ವಸ್ತುಗಳ ಕಾಯ್ದೆ ಸೆಕ್ಷನ್ 3, 4 , 5, 6 ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 10, 13, 16, 17, 18, 20 ಅಡಿ ದೂರು ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ 4 ವರ್ಷಗಳ ಹಿಂದೆ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮೊಹಮ್ಮದ್ ಹಬೀಬ್ ತನ್ನನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿ ಸಿಆರ್ಪಿಸಿ ಸೆಕ್ಷನ್ 227ರ ಅಡಿ ಅರ್ಜಿ ಸಲ್ಲಿಸಿದ್ದ.

ABOUT THE AUTHOR

...view details