ಬೆಂಗಳೂರು:ಸಿಲಿಕಾನ್ ಸಿಟಿಯನ್ನ ಬೆಚ್ಚಿಬೀಳಿಸಿದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಸದ್ಯ ಎನ್ಐಎ ಪ್ರಕರಣ ಕೈಗೆತ್ತಿಕೊಂಡು ಬೆಂಗಳೂರಿನ 12 ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಎರಡು ದಿನಗಳ ಹಿಂದೆ ದೆಹಲಿಯಲ್ಲಿಎನ್ಐಎ ಪ್ರಕರಣ ದಾಖಲಿಸಿಕೊಂಡಿದ್ದು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಎನ್ಐಎ ಡಿಐಜಿ, ಐಜಿ, ಎಸ್ಪಿ ನೇತೃತ್ವದಲ್ಲಿ ತನಿಖೆ ಶುರು ಮಾಡಿದೆ. ದಾಳಿ ವೇಳೆ ಮಹತ್ವದ ಮಾಹಿತಿ ಕಲೆಹಾಕಿ ಎನ್ಐಎ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.
ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಹುತೇಕ ಐಎಸ್ಡಿ ಮುಖಂಡರು, ಕಾರ್ಯರ್ತರು ಭಾಗಿಯಾಗಿದ್ದು, ಪ್ರಕರಣದಲ್ಲಿ ಭಯೋತ್ಪಾದನೆಯ ನಂಟು ಆರೋಪ ಕೇಳಿ ಬಂದಿದೆ. ಹೀಗಾಗಿ ಅಧಿಕೃತವಾಗಿ ಎನ್ಐಎ ಪ್ರಕರಣ ಸಂಬಂಧ ತನಿಖೆ ಶುರು ಮಾಡಿ ಭಯೋತ್ಪಾದಕ ಕೃತ್ಯದ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕುತ್ತಿದೆ.
ಹಾಗೇ ಸಿಸಿಬಿ ಹಾಗೂ ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿರುವ ಆರೋಪಿಗಳ ಮನೆ, ಕಚೇರಿಗಳಲ್ಲಿ ಆರೋಪಿಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಕೂಡ ಪರಿಶೀಲನೆ ನಡೆಸಲಿದ್ದಾರೆ. ಸದ್ಯ ಶೋಧ ಕಾರ್ಯ ಮುಂದುವರೆದಿದೆ. ಹಾಗೆಯೇ ಕೆಲ ಪ್ರಮುಖ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದು, ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕೆಲ ಕಾರ್ಪೋರೇಟರ್ಗಳ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.