ಬೆಂಗಳೂರು: ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ನಗರದ ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಶಂಕಿತ ಉಗ್ರರಿಗೆ ಸಂಬಂಧಿಸಿದ ಮನೆ ಹಾಗೂ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ವರು ಶಂಕಿತ ಉಗ್ರರ ಮನೆ ಮೇಲೆ ದಾಳಿ ಎನ್ಐಎ ಪರಿಶೀಲನೆ ನಡೆಸಿದೆ. ಜೊತೆಗೆ ಇನ್ನಿಬ್ಬರು ಶಂಕಿತರಿಗೆ ಸಂಬಂಧಿಸಿದ ಮನೆ ಮತ್ತು ವಿವಿಧ ಸ್ಥಳಗಳಲ್ಲೂ ಎನ್ಐಎ ಶೋಧ ಕಾರ್ಯ ನಡೆಸಿದೆ.
ಶಂಕಿತ ಉಗ್ರರಾದ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್ ಮತ್ತು ಮೊಹಮ್ಮದ್ ಫಾರೂಕ್ ಹಾಗೂ ತಲೆ ಮರೆಸಿಕೊಂಡಿರುವ ಜುನೈದ್ ಅಹ್ಮದ್ ಅವರಿಗೆ ಸಂಬಂಧಿಸಿದ ವಿವಿಧೆಡೆ ದಾಳಿ ನಡೆಸಲಾಗಿದೆ. ಈ ವೇಳೆ ಎನ್ಐಎ ಅಧಿಕಾರಿಗಳು 7.3 ಲಕ್ಷ ರೂ ನಗದು, ಡಿಜಿಟಲ್ ಸಾಧನಗಳು, ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಮೂವರು ತಲೆಮರೆಸಿಕೊಂಡಿದ್ದು, ಇವರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಮತ್ತು ಸ್ಪೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಐವರು ಶಂಕಿತ ಉಗ್ರರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತರಿಂದ ಶಸ್ತ್ರಾಸ್ತ್ರಗಳು, 7 ಪಿಸ್ತೂಲ್ಗಳು, 4 ಹ್ಯಾಂಡ್ ಗ್ರೆನೇಡ್ಗಳು, ಒಂದು ಮ್ಯಾಗಜಿನ್ ಮತ್ತು 45 ಜೀವಂತ ಗುಂಡುಗಳು ಮತ್ತು ನಾಲ್ಕು ವಾಕಿಟಾಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತ ಐವರ ವಿಚಾರಣೆ ಬಳಿಕ ಅವರು ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಈ ಮೂಲಕ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ 2023ರ ಅಕ್ಟೋಬರ್ 25ರಂದು ಈ ಪ್ರಕರಣವು ಎನ್ಐಎಗೆ ವರ್ಗಾವಣೆ ಆಗಿತ್ತು.
ಎನ್ಐಎ ತನಿಖೆಯಿಂದ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಲಷ್ಕರ್ ಎ ತೊಯ್ಬಾದ ಉಗ್ರ ಟಿ ನಾಸೀರ್ ಸಂಪರ್ಕಕ್ಕೆ ಈ ಐವರು ಶಂಕಿತರು ಬಂದಿದ್ದರು. ಬಳಿಕ ಇವರನ್ನು ಉಗ್ರ ನಾಸಿರ್ ಮನಃಪರಿವರ್ತನೆ ಮಾಡಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪ್ರೇರೇಪಿಸಿದ್ದನು ಎಂದು ತಿಳಿಸಿದೆ. ಬಳಿಕ ಪರಪ್ಪನ ಅಗ್ರಹಾರದಿಂದ ಬಿಡುಗಡೆಗೊಂಡ ಐವರು ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಇವರಿಗೆ ಜುನೈದ್ ಅಹ್ಮದ್ ಮತ್ತು ಟಿ ನಾಸೀರ್ ಸಹಕಾರ ನೀಡುತ್ತಿದ್ದರು ಎಂದು ಹೇಳಿದೆ.
ಶಂಕಿತ ಜುನೈದ್, 2021ರಲ್ಲಿ ರಕ್ತ ಚಂದನ ಮರ ಕಳ್ಳ ಸಾಗಣೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದು, ಇತರ ಶಂಕಿತ ಉಗ್ರರ ಜೊತೆಗೆ ಆನ್ಲೈನ್ ಮೂಲಕ ಸಂಪರ್ಕ ಸಾಧಿಸುತ್ತಿದ್ದನು.ಜುನೈದ್ ಆರೋಪಿಗಳಿಗೆ ವಿಧ್ವಂಸಕ ಕೃತ್ಯ ಎಸಗಲು ಹಣ ಪೂರೈಕೆ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಹಕರಿಸಿದ್ದನು ಎಂದು ಎನ್ಐಎ ತಿಳಿಸಿದೆ.
ಇದನ್ನೂ ಓದಿ :Suspected Terrorists: ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಅಂತ್ಯ: ಇಂದು ಕೋರ್ಟ್ಗೆ ಹಾಜರು