ಬೆಂಗಳೂರು: ಪ್ರಕರಣವೊಂದರ ಭಾಗವಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸಿದಾಗ ಸೆರೆಸಿಕ್ಕ ಬಾಂಗ್ಲಾದೇಶದ ಆರೋಪಿಯೊಬ್ಬ 42 ಜನ ಇತರೆ ಬಾಂಗ್ಲಾ ಮೂಲದ ವ್ಯಕ್ತಿಗಳನ್ನೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವು ನೀಡಿರುವುದು ತಿಳಿದು ಬಂದಿದೆ.
ಬೆಳ್ಳಂದೂರು ಪೊಲೀಸರ ವಶದಲ್ಲಿರುವ ಅಬ್ದುಲ್ ಖಾದಿರ್ ತಾಲೂಕ್ದಾರ್ ಎಂಬಾತನ ನೆರವಿನಿಂದ ಮೊಹಮ್ಮದ್ ಜಾಹೀದ್, ಖಲೀಲ್ ಚಪ್ರಾಸಿ ಸೇರಿ ಕನಿಷ್ಠ 40 ಜನ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸೆಕ್ಯೂರಿಟಿ, ಹೌಸ್ ಕೀಪಿಂಗ್, ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಗುಪ್ತಚರ ಇಲಾಖೆ ಸಂಚು ರೂಪಿಸಿರುವ ಕುರಿತು 2021ರಲ್ಲಿ ಎನ್‌ಐಎ ಲಕ್ನೋ ಘಟಕ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣದ ತನಿಖೆಯ ವೇಳೆ ಬೆಂಗಳೂರಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಆಗಸ್ಟ್ 7ರಂದು ಖಲೀಲ್ ಚಪ್ರಾಸಿಯನ್ನು ವಶಕ್ಕೆ ಪಡೆದಿದ್ದರು.
ವಿಚಾರಣೆಯಲ್ಲಿ, ಖಲೀಲ್ ಚಪ್ರಾಸಿ ಬಾಂಗ್ಲಾ ಪ್ರಜೆಯಾಗಿದ್ದು, 2011ರಲ್ಲಿ ತನ್ನ ಮಾವ ಅಬ್ದುಲ್ ಖಾದಿರ್ ಸಹಾಯದಿಂದ ಭಾರತಕ್ಕೆ ಬಂದಿರುವುದನ್ನು ಬಾಯ್ಬಿಟ್ಟಿದ್ದಾನೆ. ಬೆಳ್ಳಂದೂರಿನ ಬಳಿ ಅಬ್ದುಲ್ ಖಾದೀರ್ ತಾಲೂಕ್ದಾರ್ ಹಾಗೂ ಮೊಹಮ್ಮದ್ ಜಾಹೀದ್ ನೆಲೆಸಿರುವುದರ ಕುರಿತು ತಿಳಿಸಿದ್ದಾನೆ. ಬಾಂಗ್ಲಾದಿಂದ ಬರುವ ಅಕ್ರಮ ವಲಸಿಗರಿಗೆ ಭಾರತದಲ್ಲಿ ಉದ್ಯೋಗ, ವಸತಿ ವ್ಯವಸ್ಥೆಯನ್ನು ಅಬ್ದುಲ್ ಖಾದಿರ್ ನೋಡಿಕೊಳ್ಳುತ್ತಿದ್ದ ಎಂಬ ಮಾಹಿತಿ ಬಯಲಾಗಿದೆ.
ಮತ್ತೋರ್ವ ಆರೋಪಿ ಮೊಹಮ್ಮದ್ ಜಾಹೀದ್ ವಿಚಾರಣೆಯಲ್ಲಿ, ದುಲಾಲ್ ಎಂಬಾತನಿಗೆ ಇಪ್ಪತ್ತು ಸಾವಿರ ರೂ ಹಣ ನೀಡಿ ಆತನ ನೆರವಿನಿಂದ ಭಾರತಕ್ಕೆ ಬಂದಿರುವುದಾಗಿಯೂ ಹಾಗೂ ಅಬ್ದುಲ್ ಖಾದಿರ್ನ ಸಹಾಯದಿಂದ ನೆಲೆಸಿರುವುದಾಗಿ ಹೇಳಿದ್ದಾನೆ. ಅಬ್ದುಲ್ ಖಾದೀರ್ ಕನಿಷ್ಠ 40 ಜನ ಅಕ್ರಮ ಬಾಂಗ್ಲಾ ವಲಸಿಗರ ಹೆಸರು ತಿಳಿಸಿದ್ದು, ಎಲ್ಲರ ವಿರುದ್ಧವೂ ಬೆಳ್ಳಂದೂರು ಠಾಣೆಯಲ್ಲಿ ಅಕ್ರಮ ವಿದೇಶಿಗರ ಕಾಯ್ದೆಯಡಿ ಕೇಸು ದಾಖಲಾಗಿದೆ.
ಇದನ್ನೂ ಓದಿ :Bangladesh immigrants: ಎನ್ಐಎ ಪರಿಶೀಲನೆ ವೇಳೆ ಬೆಂಗಳೂರಲ್ಲಿ ಮೂವರು ಬಾಂಗ್ಲಾ ವಲಸಿಗರು ಪತ್ತೆ