ಕರ್ನಾಟಕ

karnataka

ETV Bharat / state

ಗಲಭೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಳ ಮನೆ ಮೇಲೆ ಎನ್‌ಐಎ ದಾಳಿ, ದಾಖಲೆ ವಶಕ್ಕೆ - ಡಿ.ಜೆ.ಹಳ್ಳಿ ಗಲಭೆ ಪ್ರಕರಣ

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ಬೆಂಗಳೂರಿನ ಏಳು ಕಡೆಗಳಲ್ಲಿ ನಡೆಸಿದ ದಾಳಿ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

nia-attack-in-related-to-kg-halli-dj-halli-riot-case
ಗಲಭೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಳ ಮನೆ ಮೇಲೆ ಎನ್‌ಐಎ ದಾಳಿ, ದಾಖಲೆ ವಶಕ್ಕೆ

By

Published : Aug 8, 2021, 2:53 AM IST

ಬೆಂಗಳೂರು:ಒಂದು ವರ್ಷದ ಹಿಂದೆ ಕಾಡುಗೊಂಡನಹಳ್ಳಿ ಮತ್ತು ದೇವರಜೀವನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಮನೆಗಳ ಮೇಲೆ ಶನಿವಾರ ನಗರದ ಏಳು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೆಲ ದಾಖಲೆಗಳು, ಎಲೆಕ್ಟ್ರಾನಿಕ್‌ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಗೋವಿಂದಪುರ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಪುಲಕೇಶಿನಗರ ಠಾಣಾ ವ್ಯಾಪ್ತಿಯ ಏಳು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಗಲಭೆ ಪ್ರಕರಣದಲ್ಲಿ ಸುಮಾರು 7ಕ್ಕೂ ಅಧಿಕ ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಘಟನೆ ನಡೆದ ಮೊದಲ ದಿನದಿಂದಲೇ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎನ್‌ಐಎ 250ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಬಂಧಿಸಿ, ನಾಪತ್ತೆಯಾಗಿರುವ ಏಳು ಮಂದಿ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಎನ್‌ಐಎಗೆ ಸೂಚಿಸಿತ್ತು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಶನಿವಾರ ಏಳು ಕಡೆ ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಅಬೀಬ್, ಪೀರ್‌ಪಾಷಾ, ರೆಹಮಾನ್, ಶಬೀರ್ ಸೇರಿ 7ಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದರು. ಈ ಸಂಬಂಧ ಗೋವಿಂದಪುರ, ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ಫಾತಿಮಾ ಲೇಔಟ್, ಕೌಸರ್ ಮಸೀದಿ ರಸ್ತೆಯ ನಾಲ್ಕು ಕಡೆ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಮೂರು ಕಡೆ ಸೇರಿ ಒಟ್ಟು ಏಳು ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ABOUT THE AUTHOR

...view details