ಬೆಂಗಳೂರು: ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಬೆಂಗಳೂರಿನ ಎಟಿಟಿ (Absconder Tracking Team -ATT) ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮೊಹಮ್ಮದ್ ಇಮ್ರಾನ್ ಖಾನ್ ಹಾಜಾ ನಜರ್ಭೀಡೆನ್ ಎಂಬಾತನೇ ಬಂಧಿತ ಆರೋಪಿ.
2021ರಲ್ಲಿ ಅಧಿಕೃತ ಹಾಗೂ ಮಾನ್ಯ ದಾಖಲೆಗಳಿಲ್ಲದೆ ಶ್ರೀಲಂಕಾ ಪ್ರಜೆಗಳ ಗುಂಪೊಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿತ್ತು. ಈ ಸಂಬಂಧ ಗುಪ್ತಚರ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ, 38 ಶ್ರೀಲಂಕಾ ಪ್ರಜೆಗಳನ್ನು ಅದೇ ವರ್ಷದ ಜೂನ್ 6ರಂದು ಬಂಧಿಸಿದ್ದರು. ಇವರನ್ನು ಅಕ್ರಮವಾಗಿ ತಮಿಳುನಾಡು ಮತ್ತು ಬೆಂಗಳೂರು ಮೂಲಕ ಮಂಗಳೂರಿಗೆ ಕರೆತರಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿತ್ತು.
ಇದನ್ನೂ ಓದಿ:ಮಾನವ ಕಳ್ಳಸಾಗಣೆ ಜಾಲ; ಮಂಗಳೂರು ಪೊಲೀಸರಿಂದ 38 ಶ್ರೀಲಂಕಾ ಪ್ರಜೆಗಳ ಬಂಧನ
ಈ ಪ್ರಕರಣದ ಅಂತರರಾಷ್ಟ್ರೀಯ ಆಯಾಮಗಳನ್ನು ಗುರುತಿಸಿ, ಎನ್ಐಎ ಮರು ತನಿಖೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ತಮಿಳುನಾಡಿನ ರಾಮನಾಥಪುರಂ ನಿವಾಸಿಯಾದ ಇಮ್ರಾನ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದೂ ಪತ್ತೆ ಹಚ್ಚಲಾಗಿತ್ತು. ಆದರೆ, ಅಂದಿನಿಂದಲೂ ಈತ ಪರಾರಿಯಾಗಿದ್ದ. ಹೀಗಾಗಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ಬೆಂಗಳೂರಿನ ಎಟಿಟಿ ನಿಗಾ ಇರಿಸಿತ್ತು. ಇದೀಗ ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಿಂದ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಅಲ್ಲದೇ, ದೀರ್ಘಕಾಲದಿಂದಲೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಕುಖ್ಯಾತ ಕಳ್ಳಸಾಗಾಣಿಕೆದಾರ ಎಂಬುದಾಗಿಯೂ ತಿಳಿದು ಬಂದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.