ಬೆಂಗಳೂರು: ರಾಷ್ಟ್ರೀಯ ತನಿಖಾದಳ (ಎನ್ಐಎ) ಈ ವರ್ಷದಲ್ಲಿ ದಾಖಲಿಸಿದ ಮತ್ತು ಇತ್ಯರ್ಥಗೊಳಿಸಿದ ಪ್ರಕರಣಗಳ ಅಂಕಿ ಅಂಶಗಳ ವಿವರಗಳು ಲಭ್ಯವಾಗಿದೆ. ಇದೇ ಮೊದಲ ಬಾರಿಗೆ ವರ್ಷವೊಂದರಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಎನ್ಐಎ ದಾಖಲು ಮಾಡಿದೆ.
2021ರಲ್ಲಿ 61 ಪ್ರಕರಣಗಳನ್ನು ದಾಖಲಿಸಿದ್ದ ಎನ್ಐಎ 2022ರಲ್ಲಿ 73 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 19.67%ರಷ್ಟು ಹೆಚ್ಚಳವಾಗಿದೆ. ಜಮ್ಮು ಮತ್ತು ಕಾಶ್ಮೀರ, ಬಿಹಾರ, ಅಸ್ಸೋಂ, ದೆಹಲಿ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ವ್ಯಾಪ್ತಿಯಲ್ಲಿ 35 ಜಿಹಾದಿ ಪ್ರಕರಣಗಳು, 11 ಜಮ್ಮು ಮತ್ತು ಕಾಶ್ಮೀರ ಸಂಬಂಧಿಸಿದ ಪ್ರಕರಣಗಳು, ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ 10 ಪ್ರಕರಣಗಳು, ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ 5 ಪ್ರಕರಣಗಳು, ಪಿಎಫ್ಐ ವಿರುದ್ಧದ 7 ಪ್ರಕರಣಗಳು, ಪಂಜಾಬ್‌ಗೆ ಸಂಬಂಧಿಸಿದ 4 ಪ್ರಕರಣಗಳು, ಅಂತಾರಾಷ್ಟ್ರೀಯ ಮಾದಕ ದಂಧೆಗೆ ಸಂಬಂಧಿಸಿದ 3 ಪ್ರಕರಣಗಳು, ಉಗ್ರವಾದಕ್ಕೆ ಆರ್ಥಿಕ ನೆರವಿಗೆ ಸಂಬಂಧಿಸಿದ 1 ಪ್ರಕರಣ ಹಾಗೂ ನಕಲಿ ಭಾರತೀಯ ಕರೆನ್ಸಿ ದಂಧೆಗೆ ಸಂಬಂಧಿಸಿದಂತೆ 2 ಪ್ರಕರಣಗಳನ್ನು ಎನ್ಐಎ ದಾಖಲಿಸಿದೆ.