ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಹೋಯ್ತು ಎಂದುಕೊಳ್ಳುವ ಹೊತ್ತಿಗೆ ಏನಾದರೂ ಒಂದು ಯಡವಟ್ಟು ಆಗಿ ಬಿಡುತ್ತದೆ. ರಾಜ್ಯ ಕಾಂಗ್ರೆಸ್ ಸಂಘಟಿತವಾಗುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೆ 'ಮುಂದಿನ ಸಿಎಂ' ಕಿತ್ತಾಟ, ಕೂಗು ಕೇಳಿಬರಲಾರಂಭಿಸಿದೆ.
ಮುಂದಿನ ಸಿಎಂ ಪ್ರಸ್ತಾಪ: ರಾಜ್ಯ ಕಾಂಗ್ರೆಸ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ತಾವೇ ಮುಂದಿನ ಸಿಎಂ ಎಂದು ಇಬ್ಬರೂ ಹೇಳಿಕೊಂಡಿದ್ದರು. ಹೈಕಮಾಂಡ್ ನಾಯಕರು ತಾಕೀತು ಮಾಡಿದ ಬಳಿಕ ಇವರ ಬೆಂಬಲಿಗರ ಮೂಲಕ ಹೇಳಿಸಲು ಆರಂಭಿಸಿದ್ದರು.
ಆದರೆ, ಇದಕ್ಕೂ ಆಗಾಗ ಕಡಿವಾಣ ಬೀಳುತ್ತಲೇ ಇತ್ತು. ಪಕ್ಷದಲ್ಲಿ ಈಗ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ಈ ಮಧ್ಯೆ ಪರಸ್ಪರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಬೆಂಬಲಿಗರು ಮುಂದಿನ ಸಿಎಂ ಪ್ರಸ್ತಾಪ ಆರಂಭಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಮುಂದಿನ ಸಿಎಂ ಕೂಗು ಕೇಳಿ ಬಂದಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ವತಃ ತಾವು ಮುಂದಿನ ಸಿಎಂ ಆಕಾಂಕ್ಷಿಗಳು ಎಂಬ ರೀತಿ ಬಣ್ಣಿಸಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಬಲಿಗರಾದ ಶಾಸಕ ಬೈರತಿ ಸುರೇಶ್, ಮಾಜಿ ಸಚಿವ ಹೆಚ್.ಎಂ ರೇವಣ್ಣ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ಸಮಾರಂಭದ ವೇದಿಕೆ ಮೇಲೆ ಘೋಷಣೆಗಳನ್ನು ಮಾಡಿದ್ದಾರೆ.
ಒಟ್ಟಾರೆ ಪಕ್ಷ ಸಂಘಟನೆ, ಬಲವರ್ಧನೆ ದೃಷ್ಟಿಯಲ್ಲಿ ಇದೊಂದು ಬೇಡದ ಬೆಳವಣಿಗೆಯಾಗಿದ್ದು, ನಾಯಕರಿಗೆ ತಮ್ಮ ಸ್ಥಾನ ಬಲಿಷ್ಠವಾದದ್ದು, ಪಕ್ಷದ ಕಾರ್ಯಕರ್ತರಿಗೆ ಈಗಲೇ ಸಂದೇಶ ರವಾನೆ ಆಗಲಿ ಎಂಬ ಆಶಯ ಎದ್ದು ಕಾಣುತ್ತಿದೆ. ನಿನ್ನೆಯ ಬೆಳವಣಿಗೆ ಇದಕ್ಕೆ ಪೂರಕವಾದ ಸಂದೇಶವನ್ನು ರವಾನಿಸಿದೆ. ಬಿಜೆಪಿ ವಿರುದ್ಧ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರ ಮನೋಬಲ ಹೆಚ್ಚಿಸುವ ಕಾರ್ಯ ಮಾಡಬೇಕಿರುವ ನಾಯಕರು ಇದೇ ರೀತಿ ಕಿತ್ತಾಡಿದರೆ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಾಗಲಿದೆ ಎಂದು ಹಿರಿಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲದಕ್ಕೂ ಕಾರಣ ಅರ್ಜಿ:ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಕೈಕಮಾಂಡ್ ನೀಡಿದ ಆದೇಶದ ಹಿನ್ನೆಲೆ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡಲಾಗಿದೆ. ನ.5 ರಿಂದ 21ರವರೆಗೆ ಅರ್ಜಿ ಸ್ವೀಕರಿಸಲಾಗಿದ್ದು, 1350 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಸ್ವತಃ ಡಿ.ಕೆ. ಶಿವಕುಮಾರ್ (ಕನಕಪುರದಿಂದ ಮರು ಆಯ್ಕೆ ಬಯಸಿ) ಹಾಗೂ ಸಿದ್ದರಾಮಯ್ಯ (ಕ್ಷೇತ್ರ ಆಯ್ಕೆ ಹೈಕಮಾಂಡ್ಗೆ ಬಿಟ್ಟು) ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರೂ ಪ್ರಬುದ್ಧ ನಾಯಕರ ಬೆಂಬಲಿಗರು ಬಹುತೇಕ ಕ್ಷೇತ್ರಗಳಿಂದ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ಬಲಪ್ರದರ್ಶನದ ಸರದಿ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಬೆಂಬಲಿಗರ ಮೂಲಕ ಹಾಗೂ ಸ್ವತಃ ತಾವೇ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲು ಇಬ್ಬರೂ ನಾಯಕರು ಸಿದ್ಧತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.
ಸುರೇಶ್ ಆರಂಭ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ನಿನ್ನೆ ವಿ. ನಾಗೇನಹಳ್ಳಿಯಲ್ಲಿ ಕನಕದಾಸರ ಜಯಂತಿ ಆಚರಿಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮುಂದಿನ ಸಿಎಂ ಪ್ರಸ್ತಾಪಕ್ಕೆ ಚಾಲನೆ ನೀಡಿದ್ದಾರೆ. ಕನಕದಾಸ ಕಾರ್ಯಕ್ರಮದಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಘೋಷಣೆ ಹಾಕಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳೂ ಕೂಡ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ಚಾಮರಾಜಪೇಟೆಯಲ್ಲಿ ಒಕ್ಕಲಿಗ ಸಮುದಾಯದ ವಿಶೇಷ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಂದರ್ಭ, ನಿಮ್ಮ ಶಕ್ತಿ ಉತ್ಸಾಹ ನೋಡಿದ್ರೆ, ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ನೀವು ಮನಸ್ಸು ಮಾಡಿದರೆ ವಿಧಾನಸೌಧ, ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ. ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದ್ದಾರೆ.