ಬೆಂಗಳೂರು :ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಮತೂಕದ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಮೂಲಕ ದೆಹಲಿ ಬಿಜೆಪಿ ವರಿಷ್ಠರು ಜಾಣ್ಮೆ ಪ್ರದರ್ಶಿಸಿದ್ದಾರೆ. ಆದರೆ, ಮುಂದೆ ಎದುರಾಗುವ ಸವಾಲುಗಳನ್ನು ಅವರು ಮೆಟ್ಟಿ ನಿಲ್ಲುವರೇ? ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಮೂಡಿದೆ.
ಜನತಾಪರಿವಾರದಿಂದ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಇನ್ನು ಮುಂದೆಯೂ ಸಹ ಅವರು ತಮ್ಮ ಸ್ವಂತಿಕೆಯ ಮೂಲಕ ಆಡಳಿತದಲ್ಲಿ ತಮ್ಮದೇ ವಿಶಿಷ್ಟ ಛಾಪನ್ನು ಮೂಡಿಸುವ ಅಗತ್ಯವಿದೆ. ಬೊಮ್ಮಾಯಿ ಅವರಿಗೆ ಅದು ಸಾಧ್ಯವಾಗುವುದೇ? ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅಧಿಕಾರದಲ್ಲಿದ್ದಷ್ಟು ಕಾಲ ಅವರಿಗೆ ಅವರ ಕುಟುಂಬಸ್ಥರೇ ಕಂಟಕಪ್ರಾಯರಾಗಿ ಪರಿಣಮಿಸಿದ್ದರು. ಇದರಿಂದಾಗಿಯೇ ಅವರು ಜೈಲಿಗೆ ಹೋಗಿ ಬಂದರು. ಅವಧಿಪೂರ್ಣ ಗೊಳಿಸಲಾಗದೆ ಒಂದಲ್ಲಾ ಎರಡೆರಡು ಬಾರಿ ಅವರು ತಮ್ಮ ಅಧಿಕಾರ ಕಳೆದುಕೊಂಡರು ಎಂಬುದು ಇತಿಹಾಸ.
ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರ ಆರೋಪಗಳಿಗೀಡಾದರು. ಇದರ ವಿರುದ್ಧ ಹಲವರು ನಾಯಕರು ಬಹಿರಂಗವಾಗಿಯೇ ಸಮರ ಸಾರಿದರು. ತಮ್ಮ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದರೆ, ಆಡಳಿತದಲ್ಲಿ ಅವರ ಹಸ್ತಕ್ಷೇಪ ಅಥವಾ ಪ್ರಭಾವ ಇರುವುದಿಲ್ಲ ಎಂದು ಹೇಳಲಾಗದು.
ಬೊಮ್ಮಾಯಿ ಆರ್ಎಸ್ಎಸ್ ನಂಟೇನು?
ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ಅವರಿಗೆ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ರೇವಣ್ಣ ಅವರ ಗುಮ್ಮ ಕಾಡುತಿತ್ತು. ಸಿಎಂ ಆಗಿ ಅವರ ತಮ್ಮ ಅಧಿಕಾರವನ್ನು ಸರಿಯಾಗಿ ನಡೆಸಲು ಆಗುತ್ತಿರಲಿಲ್ಲ ಎಂಬ ಮಾತು ಜನಜನಿತ. ಮೊದಲಿನಿಂದಲೂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಬಗ್ಗೆ ಅಪಾರ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಪರಿಣಾಮವಾಗಿ ಅನಾಯಾಸವಾಗಿ ಅವರಿಗೆ ಸಿಎಂ ಸ್ಥಾನ ದಕ್ಕಿದೆ.
ಈಗ ಬೊಮ್ಮಾಯಿ ಅವರು ಆಡಳಿತದಲ್ಲಿ ಯಡಿಯೂರಪ್ಪ ಮತ್ತು ಮಕ್ಕಳ ಬಿಗಿಹಿಡಿತದಿಂದ ಪಾರಾಗಿ ಕಳಂಕರಹಿತ ಆಡಳಿತಕ್ಕೆ ಶ್ರಮಿಸಲು ಸಾಧ್ಯವೆ ಎಂಬುದು ಮುಂಬರುವ ದಿನಗಳಲ್ಲಿ ಅವರು ನಡೆಸುವ ಆಡಳಿತ ವೈಖರಿಯಿಂದ ಸಬೀತಾಗಲಿದೆ. ಇನ್ನು, ಬಸವರಾಜ ಬೊಮ್ಮಾಯಿ ಮೂಲತಃ ಆರ್ಎಸ್ಎಸ್ನವರಲ್ಲ. ಆದರೆ, ಈಗ ಅವರ ಆಡಳಿತದ ನೀತಿ-ನಿರೂಪಣೆಗಳಲ್ಲಿ ಆರ್ಎಸ್ಎಸ್ ಪಾತ್ರ ಮತ್ತು ಪ್ರಭಾವ ಇದ್ದೇ ಇರುತ್ತದೆ.
ಆರ್ಎಸ್ಎಸ್ ಚೌಕಟ್ಟನ್ನು ಮೀರದೇ, ಸಂಘದ ಮನೋಧರ್ಮಕ್ಕೆ ಹೊಂದಿಕೊಂಡು ಆಡಳಿತ ನಡೆಸುವ ಗುಣವನ್ನು ಗೃಹಸಚಿವರಾಗಿ ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇದೇ ಮನೋಧರ್ಮವನ್ನು ಇನ್ನು ಮುಂದೆಯೂ ಅವರಿಂದ ನಿರೀಕ್ಷಿಸಬಹುದೇ ಹೊರತು ವಿಶಾಲ ಮನೋಭಾವನೆಯ ಜನಮುಖಿ ಆಡಳಿತವನ್ನಲ್ಲ. ಆದಾಗಿಯೂ ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಿಸುವ ವಿಷಯದಲ್ಲಿ ಅವರ ವಿಶಾಲ ದೃಷ್ಟಿಕೋನ ಅನಿವಾರ್ಯ.
ಕಳೆದ ವರ್ಷ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಪೊಲೀಸ್ ಫೈರಿಂಗ್ ಪ್ರಕರಣ ಸಂದರ್ಭದಲ್ಲಿ ಗೃಹ ಸಚಿವರಾಗಿ ಅವರು ನಡೆದುಕೊಂಡ ಹಾಗೂ ಅನುಸರಿಸಿದ ರೀತಿ-ನೀತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ನು ಮುಂದೆಯಾದರೂ ಪಕ್ಷಪಾತಕ್ಕೆ ಅವಕಾಶ ನೀಡದೇ ಉತ್ತಮ ಆಡಳಿತಕ್ಕೆ ಶ್ರಮಿಸುವ ಸವಾಲು ಅವರ ಮುಂದಿದೆ.
ಕೊರೊನಾ ಸವಾಲು?
ಕೊರೊನಾ 3ನೇ ಅಲೆಯ ಸವಾಲು ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಹಿಂದಿನ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೋವಿಡ್ ಎರಡನೇ ಅಲೆ ಬಂದಾಗ ರಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣದಲ್ಲೇ ಸಾವು-ನೋವುಗಳು ಸಂಭವಿಸಿದ್ದವು. ಪೂರ್ವಭಾವಿ ಸಿದ್ಧತೆಗಳಿಲ್ಲದ ಪರಿಣಾಮ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ಗಳಿಲ್ಲದೇ ಕೊರೊನಾ ಸೋಂಕಿತರು ಪರದಾಡಿ ಪ್ರಾಣಬಿಡಬೇಕಾಯಿತು.
ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಕಾರಣ ಯಡಿಯೂರಪ್ಪ ಸರ್ಕಾರಕ್ಕೆ ಅತ್ಯಂತ ಕೆಟ್ಟ ಹೆಸರು ತಂದುಕೊಟ್ಟಿತು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಕೊರೊನಾ ಸೋಂಕು ಸೃಷ್ಟಿಸಬಹುದಾದ ಸವಾಲು ಇದ್ದೇ ಇದೆ. ಇದೀಗ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಹೇಳಿದ್ದು, ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.