ಬೆಂಗಳೂರು: ನವಜಾತ ಶಿಶು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ನರ್ಸ್‌ವೊಬ್ಬರಿಗೆ ಧಾರವಾಡದಲ್ಲಿರುವ ಹೈಕೋರ್ಟ್ ವಿಭಾಗೀಯ ಪೀಠ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ಮಂಜೂರು ಕೋರಿ ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಅಶ್ವಿನಿ ಗಣಪತಿ ಹರಿಕಾಂತ್ರ (24) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ದೂರಿನ ಎಲ್ಲ ಅಂಶಗಳನ್ನು ಗಮನಿಸಿದರೆ ಮೊದಲ ಮತ್ತು ಎರಡನೇ ಆರೋಪಿ ನಡುವೆ ಮಗು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಸಂಬಂಧ ಅರ್ಜಿದಾರ ಬಗ್ಗೆ ನಿರ್ದಿಷ್ಟ ಆರೋಪವಿಲ್ಲ. ಈ ವಿಚಾರವು ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸಿ ಸತ್ಯಾಂಶವನ್ನು ಪತ್ತೆ ಹಚ್ಚಬೇಕಿದೆ.
ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವಂತ ಆರೋಪಗಳು ಅರ್ಜಿದಾರರ ಮೇಲಿಲ್ಲ. ಅರ್ಜಿದಾರೆ ಮಹಿಳೆಯಾಗಿದ್ದು, ಅವರು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಅವರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಅಭಿಪ್ರಾಯಪಟಿದೆ.
ಅಲ್ಲದೆ, ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ನೀಡಬೇಕು. ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸಹಕರಿಸಬೇಕು. ಅಗತ್ಯವಿದ್ದಾಗೆಲ್ಲಾ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಬಾರದು ಎಂದು ಅರ್ಜಿದಾರೆಗೆ ಷರತ್ತು ವಿಧಿಸಿದ ಹೈಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ ಏನು?:2022ರ ಸೆ.5ರಂದು ಮಹಿಳೆಯೊಬ್ಬರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಗುವಿನ ತಾಯಿಗೆ ಹಣದ ನೆರವು ಬೇಕಿತ್ತು. ಈ ವಿಷಯವನ್ನು ಅದೇ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಅರ್ಜಿದಾರೆಗೆ ಹೇಳಿಕೊಂಡಿದ್ದರು. ಬಡತನ ಇರುವುದರಿಂದ ಮಗುವನ್ನು ನೋಡಿಕೊಳ್ಳಲು ತನಗೆ ಸಾಧ್ಯವಿಲ್ಲ. ಮಗುವನ್ನು ನೋಡಿಕೊಳ್ಳುವಂತಹವರು ಸಿಕ್ಕರೆ, ಅವರಿಗೆ ಹಣಕ್ಕಾಗಿ ಮಗುವನ್ನು ನೀಡಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದ್ದಳು.