ಬೆಂಗಳೂರು: ಹೊಸ ವರ್ಷಾಚರಣೆಯ ನಿಮಿತ್ತ ನೇರಳೆ ಮತ್ತು ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರದ ಸಮಯವನ್ನು ವಿಸ್ತರಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ನಮ್ಮ ಮೆಟ್ರೋ ಸಂಸ್ಥೆಯ ಕೊನೆಯ ರೈಲುಗಳು ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗಿನ ಜಾವ 1.30ಕ್ಕೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ 2:15ಕ್ಕೆ ಎಲ್ಲ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಹೊರಡಲಿದೆ. ಈ ವಿಸ್ತ್ರತ ಅವಧಿಯಲ್ಲಿ ರೈಲು ಸೇವೆಗಳು 15 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.
ಪೊಲೀಸ್ ಇಲಾಖೆಯ ಸಲಹೆಯ ಮೇರೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮಹಾತ್ಮಾ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಸಾರ್ವಜನಿಕ ಪ್ರವೇಶ ಮತ್ತು ನಿರ್ಗಮನಕ್ಕೆ 31ರ ರಾತ್ರಿ 11:00 ಗಂಟೆಯಿಂದ ಮುಚ್ಚಲಾಗುತ್ತಿದೆ. ನಂತರ ರೈಲುಗಳು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ. ಆದರೆ ಮೆಟ್ರೋ ರೈಲುಗಳು ಪಕ್ಕದ ನಿಲ್ದಾಣ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ನಿಲ್ಲಲಿದೆ ಎಂದು ತಿಳಿಸಿದೆ.
ಯಾವುದೇ ಮೆಟ್ರೋ ನಿಲ್ದಾಣಗಳಿಂದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ಗೆ ವಿಸ್ತರಿಸಿದ ಅವಧಿಯಲ್ಲಿ ಪ್ರಯಾಣದ ಟೋಕನ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್‌ಗಳನ್ನು ಪಡೆಯಬಹುದು. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಿಂದ ರಾತ್ರಿ 11 ಗಂಟೆಯ ನಂತರ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗಲು ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್‌ಗಳ ಬದಲಿಗೆ ಪೇಪರ್ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಹೇಳಿದೆ.