ಬೆಂಗಳೂರು: ಹೊಸ ವರ್ಷಾಚರಣೆಗೆ ನಿನ್ನೆ ರಾತ್ರಿಯಿಡೀ ಬೆಂಗಳೂರಿನ ಪ್ರತಿಷ್ಟಿತ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಜಗಮಗಿಸುತ್ತಿತ್ತು. ಕೊರೊನಾದಿಂದಾಗಿ ಈ ಹಿಂದಿನ ಎರಡು ಹೊಸ ವರ್ಷದ ಉತ್ಸವಕ್ಕೆ ಮಂಕು ಕವಿದಿತ್ತು. ಆದರೆ, ಈ ವರ್ಷ ಜನರಲ್ಲಿ ಸಂಭ್ರಮೋಲ್ಲಾಸ ಕಂಡುಬಂತು.
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಸ್ಥಳಗಳೆಂದರೆ ಅದು ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆ. ಇಲ್ಲಿನ ಜಂಕ್ಷನ್‌ಗಳಲ್ಲಿ ಸಾವಿರಾರು ಮಂದಿ ಸೇರಿ ಖುಷಿಪಟ್ಟರು. ಮಧ್ಯರಾತ್ರಿ 11.59 ಹಿಮ್ಮುಖ ಕೌಂಟ್‌ಡೌನ್ ಆರಂಭವಾಗಿ ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಜನರಲ್ಲಿ ಸಂತಸದಿಂದ ಕೇಕೆ, ಶಿಳ್ಳೆ ಹಾಕಿ ಕುಣಿದಾಡಿದರು. ಪರಸ್ಪರ ಹ್ಯಾಪಿ ನ್ಯೂ ಇಯರ್ ಎನ್ನುತ್ತಾ ಶುಭಾಶಯ ವಿನಿಮಯ ಮಾಡಿಕೊಂಡರು. ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು.
ಹೊಸ ವರ್ಷಾಚರಣೆಗೆಂದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳಲ್ಲಿ ಎರಡ್ಮೂರು ದಿನಗಳ ಮೊದಲೇ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇನ್ನು, ಈ ಬಾರಿ ಕೋವಿಡ್ ನಿಬಂಧನೆಗಳ ಅನ್ವಯ ಬಿಬಿಎಂಪಿ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ ರಾತ್ರಿ 8 ಗಂಟೆಯ ಸುಮಾರಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನಸ್ತೋಮ ಹೆಚ್ಚಾಗುತ್ತಾ ಸಾಗಿತು. ಯುವ ಪ್ರೇಮಿಗಳು, ಸ್ನೇಹಿತರು, ರಂಗುರಂಗಿನ ಉಡುಗೆ ತೊಡುಗೆಗಳಲ್ಲಿ ಮಿಂಚಿದರು.
ನಾನಾ ನಮೂನೆಯ ಸಂಗೀತ ವಾದ್ಯಗಳು, ಬಲೂನು, ಹೊಸ ವರ್ಷ ಶುಭಾಶಯ ಕೋರುವ ಫಲಕಗಳನ್ನು ಹಿಡಿದು ತಂಡೋಪತಂಡವಾಗಿ ರಸ್ತೆಗಳಿಗೆ ಬಂದಿದ್ದರು. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವ ಜನತೆ ವರ್ಷಪೂರ್ತಿ ಇದೇ ಹರುಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ಕೋರಿದರು. ಮಕ್ಕಳ ಜತೆ ಕುಟುಂಬಸಮೇತ ಆಗಮಿಸಿದ ಸಾರ್ವಜನಿಕರು ಸಮೀಪದ ಹೋಟೆಲ್‌ಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರು.
ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ಪಬ್‌ಗಳು: ನಗರದಾದ್ಯಂತ ಶನಿವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರ, ಜಯನಗರ, ಇಂದಿರಾನಗರ, ಕೋರಮಂಗಲ, ಮಾರತ್ತಹಳ್ಳಿ, ಹಲಸೂರು, ಕಾಡುಗೋಡಿ, ವೈಟ್ ಫೀಲ್ಡ್ ಹಾಗೂ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯ ಪ್ರಮುಖ ಕಟ್ಟಡ, ಹೋಟೆಲ್, ರೆಸ್ಟೋರೆಂಟ್ ಪಬ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು.
ಸಂಜೆ 7 ಗಂಟೆಯಿಂದಲೇ ನಗರದ ಬಹುತೇಕ ಐಷಾರಾಮಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೋಜು ಮಸ್ತಿ ಆರಂಭವಾಗಿತ್ತು. ಕೆಲವು ಮಳಿಗೆಗಳ ಮುಂದೆ ಅಳವಡಿಸಿದ್ದ ಧ್ವನಿವರ್ಧಕಗಳಿಂದ ವಿದೇಶಿ ಮಿಶ್ರಿತ ಸಂಗೀತ ಕೇಳಿಬರುತ್ತಿತ್ತು. ಅದ್ರಲ್ಲೂ ಎಂ.ಜಿ.ರಸ್ತೆೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ರಸ್ತೆಗಳಲ್ಲಿರುವ ಪಬ್, ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು.