ಬೆಂಗಳೂರು:ಹೊಸ ವರ್ಷಕ್ಕೆ ಇನ್ನೂ 3 ದಿನಗಳು ಮಾತ್ರ ಬಾಕಿ ಇದ್ದು, ಆಚರಣೆ ಜೋರಾಗಿಯೇ ಇರುತ್ತದೆ. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ತೊಡಕು ಉಂಟಾಗಬಾರದು ಎಂದು ಮೆಟ್ರೋ ಸಮಯ ವಿಸ್ತರಣೆ ಮಾಡಲಾಗಿದೆ.
ನಮ್ಮ ಮೆಟ್ರೋ ಎಲ್ಲ ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸೇವೆಯನ್ನು ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಮುಂಜಾನೆ 2ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಣೆಯ ಸಮಯದಲ್ಲಿ ಮೆಟ್ರೋ ರೈಲುಗಳು ಪ್ರತಿ ಹದಿನೈದು (15) ನಿಮಿಷಗಳಿಗೊಮ್ಮೆ ಸಂಚರಿಸುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‍ನಿಂದ ಜನವರಿ 1 ರಂದು ಮುಂಜಾನೆ 2ಗಂಟೆಗೆ ಎಲ್ಲ ನಾಲ್ಕು ದಿಕ್ಕುಗಳಿಗೂ ಕೊನೆಯ ಮೆಟ್ರೋ ರೈಲು ಹೊರಡುತ್ತವೆ.
ನ್ಯೂ ಇಯರ್ ಸೆಲೆಬ್ರೇಷನ್....ಪ್ರಯಾಣಿಕರಿಗಾಗಿ ನಮ್ಮ ಮೆಟ್ರೋ ಓಡಾಟದ ಸಮಯ ವಿಸ್ತರಣೆ! 01.01.2020ರ ಮುಂಜಾನೆ, ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಈ ಕೆಳಗಿನ ಸಮಯಕ್ಕೆ ಹೊರಡುತ್ತವೆ.
1) ಬೈಯಪ್ಪನಹಳ್ಳಿ ಮುಂಜಾನೆ 01.35 ಗಂಟೆಗೆ
2) ಮೈಸೂರು ರಸ್ತೆ ಮುಂಜಾನೆ 01.40 ಗಂಟೆಗೆ
3) ನಾಗಸಂದ್ರ ಮುಂಜಾನೆ 01.30 ಗಂಟೆಗೆ
4) ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಮುಂಜಾನೆ 01.35 ಗಂಟೆ
ವಿಸ್ತರಿಸಿದ ಅವಧಿಯಲ್ಲಿ, ಮಹಾತ್ಮಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್‍ಪಾರ್ಕ್ ನಿಲ್ದಾಣಗಳಿಂದ ಇತರ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ರೂ.50/ ಪೇಪರ್ ಟಿಕೆಟ್‍ಗಳನ್ನು ವಿತರಿಸಲಾಗುವುದು. ನಿಲ್ದಾಣಗಳಲ್ಲಿ ವಿಸ್ತರಿಸಿದ ಅವಧಿಯಲ್ಲಿ ಟೋಕನ್‍ಗಳನ್ನು ವಿತರಿಸಲಾಗುವುದಿಲ್ಲ ಅಂತ ಪ್ರಕಟಣೆ ಹೊರಡಿಸಿದೆ.
ಪ್ರಯಾಣಿಸಲು ಅನುಕೂಲವಾಗುವಂತೆ ಪೇಪರ್ ಟಿಕೆಟ್‍ಗಳನ್ನು ಡಿಸೆಂಬರ್ 31ರಂದು ರಾತ್ರಿ 8.00 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮುಂಚಿತವಾಗಿ ಖರೀದಿಗೆ ಲಭ್ಯವಿರುತ್ತವೆ. ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಮೊದಲಿನಂತೆಯೇ ವಿಸ್ತರಿಸಲಾದ ಅವಧಿಯಲ್ಲಿಯೂ ರಿಯಾಯಿತಿ ದರದಲ್ಲಿಯೇ ಪ್ರಯಾಣ ಮಾಡಬಹುದು.
ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಹೊರತುಪಡಿಸಿ ಯಾವುದೇ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್‍ಗಳ ಮೂಲಕ ಸಾಮಾನ್ಯ ದರದಲ್ಲಿ ಪ್ರಯಾಣಿಸಬಹುದು. ಇನ್ನು ಪ್ರಮುಖವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಮ್ಮ ಮೆಟ್ರೋದಲ್ಲಿ ಕುಡುಕರಿಗೆ ಪ್ರವೇಶ ನಿಷೇಧಿಸಲಾಗಿದೆ.