ಬೆಂಗಳೂರು: ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಭರದಿಂದ ಸಿದ್ಧತೆ ಏರ್ಪಟಿದ್ದು, ಈ ಸಂಭ್ರಮದ ನಡುವೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಬರೊಬ್ಬರಿ 37 ವುಮೆನ್ ಸೇಫ್ಟಿ ಐಲ್ಯಾಂಡ್ಸ್ (ಮಹಿಳಾ ಸುರಕ್ಷತಾ ವಲಯಗಳನ್ನು) ನಿರ್ಮಿಸಲಾಗಿದೆ.
ಸೆಲೆಬ್ರೇಷನ್ ನಡೆಯುವ ಪ್ರತಿ ರಸ್ತೆಗೆ ಎರಡರಿಂದ ಮೂರು ವುಮೆನ್ ಸೇಫ್ಟಿ ಐಲ್ಯಾಂಡ್ಸ್ ನಿರ್ಮಿಸಲಾಗಿದ್ದು, ಪ್ರತೀ ಐಲ್ಯಾಂಡ್ ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಪ್ರಥಮ ಚಿಕಿತ್ಸಾ ಪರಿಕರಗಳು, ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನದಟ್ಟಣೆ ಇರುವ ಜಾಗಗಳಲ್ಲಿ ಮತ್ತಷ್ಟು ಸೇಫ್ಟಿ ಐಲ್ಯಾಂಡ್ಸ್ ಹೆಚ್ಚಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೇ ಎಂ.ಜಿ ರಸ್ತೆ , ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ 34 ವೀಕ್ಷಣಾ ಗೋಪುರಗಳನ್ನ ನಿರ್ಮಾಣ ಮಾಡಲಾಗಿದೆ. ಸಂಜೆಯಿಂದಲೇ ಗೋಪುರಗಳ ಮೇಲೆ ನಿಂತು ಪ್ರತಿಯೊಬ್ಬರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಸಿಲಿಕಾನ್ ಸಿಟಿಯ ಹೋಟೆಲ್ಸ್, ಪಬ್, ಬಾರ್ & ರೆಸ್ಟೋರೆಂಟ್ಗಳಲ್ಲಿ ತುಸು ಜೋರಾಗಿಯೇ ಇಂದು ಜನ ಸೇರುವ ನಿರೀಕ್ಷೆಯಿದೆ. ಆದ್ದರಿಂದ ಸೂಕ್ತ ಭದ್ರತೆಗೆ ಬೆಂಗಳೂರು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪಾರ್ಟಿ ಮೂಡ್ನಲ್ಲಿದ್ದವರು ಟೆರೆಸ್ ಮೇಲೆ ಹೋಗುವಂತಿಲ್ಲ. ಮದ್ಯಪಾನದ ಅಮಲಿನಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳೂ ಸಹ ಇರುವುದರಿಂದ ಓಪನ್ ಟೆರೆಸ್ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪಬ್, ಹೋಟೆಲ್, ಬಾರ್ ರೆಸ್ಟೋರೆಂಟ್ಗಳ ಮಾಲೀಕರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.