ಬೆಂಗಳೂರು:''ರಾಜ್ಯದಾದ್ಯಂತ ಒಟ್ಟು 1,695 ಅನಧಿಕೃತ ಶಾಲೆಗಳಿವೆ. ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯ ನೀಡಬೇಕಿದೆ. ಸಮಯಾವಕಾಶ ನೀಡಿ, ಬಳಿಕ ಹಂತಹಂತವಾಗಿ ಶಾಲೆಗಳನ್ನು ಮುಚ್ಚುತ್ತೇವೆ. ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ. ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು'' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ರಾಜ್ಯಾದ್ಯಂತ 26 ಶಾಲೆಗಳು ನೋಂದಣಿಯನ್ನೇ ಮಾಡಿಲ್ಲ. ಅನುಮತಿ ಪಡೆಯದೇ ಉನ್ನತೀಕರಿಸಿರುವ ಶಾಲೆಗಳು 76, ಇತರೆ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಅನುಮತಿ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಪಡೆದಿರುವ 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ 190, ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು 495 ಇವೆ'' ಎಂದು ಸಚಿವರು ಮಾಹಿತಿ ನೀಡಿದರು.
ಶಾಲಾ ವಿದ್ಯುತ್, ನೀರಿನ ಬಿಲ್ ಮನ್ನಾ ಚಿಂತನೆ: ''ಸರ್ಕಾರಿ ಶಾಲೆಗಳ ನೀರು ಮತ್ತು ವಿದ್ಯುತ್ ಬಿಲ್ ಮೊತ್ತವನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಅತಿ ಕಡಿಮೆ ಮೊತ್ತದ ಬಿಲ್ ಗಳಿರುವುದರಿಂದ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದು'' ಎಂದರು.