ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹೊಸ ಮರಳು ನೀತಿ.. ನಿಯಮ, ವಿಶೇಷತೆಗಳೇನು? - New sand policy

ರಾಜ್ಯದಲ್ಲಿ ಅಕ್ರಮ ತಡೆಯುವ ಹಾಗೂ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂಥ ಮರಳು ನೀತಿ ತರುವುದಾಗಿ ಹೇಳಿ ಪ್ರತಿ ಸರ್ಕಾರಗಳು ತಮ್ಮ ಅಧಿಕಾರಾವಧಿಯಲ್ಲಿ ಹೊಸ ಮರಳು ನೀತಿಗಳನ್ನು ಜಾರಿಗೆ ತರುತ್ತಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೀಗ ಒಂದು ವರ್ಷದಲ್ಲೇ ಮತ್ತೊಂದು ಹೊಸ ಮರಳು ನೀತಿ ಜಾರಿಗೊಳಿಸುವ ಮಂತ್ರ ಪಠಿಸುತ್ತಿದೆ.

New sand policy specialities
ಮತ್ತೊಂದು ಹೊಸ ಮರಳು ನೀತಿ ಜಾರಿಗೆ ಮುಂದಾದ ರಾಜ್ಯ ಸರ್ಕಾರ

By

Published : Mar 26, 2021, 5:03 PM IST

ಬೆಂಗಳೂರು:ರಾಜ್ಯದಲ್ಲಿ ಮತ್ತೊಂದು ಹೊಸ ಮರಳು ನೀತಿ ಜಾರಿಗೊಳಿಸುವ ಬಗ್ಗೆ ಸರ್ಕಾರ ತಯಾರಿ ನಡೆಸುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಆಗಿನ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಅಣತಿಯಂತೆ ಹೊಸ ಮರಳು ನೀತಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ನೂತನ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮತ್ತೊಂದು ಹೊಸ ಮರಳು ನೀತಿ ಜಾರಿಗೆ ತರಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಅಕ್ರಮ ತಡೆಯುವ ಹಾಗೂ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂಥ ಮರಳು ನೀತಿ ತರುವುದಾಗಿ ಹೇಳಿ ಪ್ರತಿ ಸರ್ಕಾರಗಳು ತಮ್ಮ ಅಧಿಕಾರವಧಿಯಲ್ಲಿ ಹೊಸ ಮರಳು ನೀತಿಗಳನ್ನು ಜಾರಿಗೆ ತರುತ್ತಿದೆ. ಆದರೆ, ಅದು ಉದ್ದೇಶಿತ ಫಲ ನೀಡುವಲ್ಲಿ ಮಾತ್ರ ವಿಫಲವಾಗುತ್ತಿದೆ. ಇದೀಗ ಬಿಜೆಪಿ ಸರ್ಕಾರ ಮತ್ತೊಂದು ಹೊಸ‌ ಮರಳು ನೀತಿಯ ಮಂತ್ರ ಪಠಿಸುತ್ತಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೀಗ ಒಂದು ವರ್ಷದಲ್ಲೇ ಎರಡನೇ ಹೊಸ ಮರಳು ನೀತಿ ಜಾರಿಗೊಳಿಸುವ ಮಂತ್ರ ಪಠಿಸುತ್ತಿದೆ.

ಕಳೆದ ವರ್ಷ ತೆಲಂಗಾಣ ಮಾದರಿ ಮರಳು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು.‌ ಆದರೆ ಇದೀಗ ಸಚಿವ ನಿರಾಣಿ ಸ್ವಂತ ಸರಳೀಕೃತ ಮರಳು ನೀತಿ ಜಾರಿಗೊಳಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಅದರ ಕರಡು ಸಿದ್ಧವಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಇದನ್ನೂ ಓದಿ:ನಾಳೆ ಒಂದು ಗಂಟೆ ಕಾಲ ವಿದ್ಯುತ್ ದೀಪ ಆರಿಸಲು ಬೆಸ್ಕಾಂ ಮನವಿ.. ಅದಕ್ಕೆ ಕಾರಣವೂ ಇದೆ..

ಹೊಸ ಮರಳು ನೀತಿಯಲ್ಲಿರುವ ವಿಶೇಷತೆ ಏನು?

  • ಹೊಸ ಮರಳು ನೀತಿ ಸರಳೀಕೃತವಾಗಲಿದ್ದು, ಈ ಹಿಂದಿನ ನೀತಿಯಲ್ಲಿದ್ದ ಕಠಿಣ ಅಂಶಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಅದರಲ್ಲೂ ಬಡವರಿಗೆ ಉಚಿತವಾಗಿ ಮರಳು ನೀಡಲು ನೀತಿ ರೂಪಿಸಲಾಗುತ್ತಿದೆ.
  • 10 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಹೊಸ ಮರಳು ನೀತಿಯನ್ನು ಜಾರಿಗೆ ತರಲು ಚಿಂತಿಸಲಾಗಿದೆ. ಬಡವರಿಗೆ ಮನೆ ಕಟ್ಟಿಕೊಳ್ಳಲು ತೊಂದರೆಯಾಗದಂತೆ ಉಚಿತ ಅಥವಾ ಒಂದು ಟನ್ ಮರಳಿಗೆ 100 ಅಥವಾ 200 ರೂಪಾಯಿ ದರದಲ್ಲಿ ನಿಗದಿ ಪಡಿಸುವ ಚಿಂತನೆ ಇದೆ.
  • ಇನ್ನು ಹೊಸ ನೀತಿಯನ್ವಯ ಟ್ರ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನ, ಮರಳು ಸಾಗಣೆ ಮಾಡಿದರೆ ಕೇಸ್ ದಾಖಲಿಸಲಾಗುವುದಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಕೇಸ್ ದಾಖಲಿಸುವ ನಿಟ್ಟಿನಲ್ಲಿ ತಿದ್ದುಪಡಿ ತರಲಾಗುತ್ತಿದೆ. ಅದೇ ರೀತಿ ದ್ವಿಚಕ್ರ ವಾಹನ, ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಕತ್ತೆ ಮೇಲೆ ಮರಳು ಕೊಂಡೊಯ್ಯುವ ರೈತರು, ಬಡವರಿಗೆ ರಾಯಲ್ಟಿಯಿಂದ ವಿನಾಯಿತಿ ನೀಡಲಾಗುತ್ತದೆ.
  • ಹೊಸ ನೀತಿ ಪ್ರಕಾರ ಹಳ್ಳ, ಉಸುಕು, ನಿಕ್ಷೇಪಗಳಲ್ಲಿನ ಮರಳನ್ನು ಮಾತ್ರ ತೆಗೆಯಬಹುದಾಗಿದೆ. ಮರಳು ಗಣಿಗಾರಿಕೆಗೆ ಹರಾಜಿನ ಮೂಲಕ ನೀಡಲಾದ ಪ್ರದೇಶ ಹೊರತುಪಡಿಸಿದ ಹಳ್ಳ, ತೊರೆಗಳಲ್ಲಿನ ಮರಳನ್ನು ಸ್ವಂತ ಬಳಕೆಗಾಗಿ ರೈತರು, ಬಡವರು ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌, ಎತ್ತಿನ ಗಾಡಿ ಮೇಲೆ ಕೊಂಡೊಯ್ಯಬಹುದು. ಇದಕ್ಕೆ ಪರವಾನಗಿ ಬೇಕಾಗಿಲ್ಲ. ಮರಳು ಸಾಗಾಟಕ್ಕೆ ಯಾವುದೇ ಮಿತಿಯನ್ನೂ ಹಾಕಲಾಗುವುದಿಲ್ಲ. ಜೊತೆಗೆ ರಾಯಲ್ಟಿಯನ್ನೂ ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿದೆ.
  • ಆದರೆ, ಈ ರೀತಿ ಸಾಗಿಸಿದ ಮರಳು ಸಂಗ್ರಹಿಸಿಟ್ಟು ಲಾರಿ, ಟಿಪ್ಪರ್‌ಗಳಲ್ಲಿ ಬೇರೆಡೆ ಕಳುಹಿಸಲು ಅವಕಾಶ ನೀಡುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಇನ್ನು ದೊಡ್ಡ ಕಟ್ಟಡ, ಗುತ್ತಿಗೆದಾರರು, ಸರಕಾರಿ ಕಟ್ಟಡ, ಅಪಾರ್ಟ್‌ಮೆಂಟ್‌, ಬಂಗಲೆ ನಿರ್ಮಾಣ ಮಾಡುವವರಿಗೆ ಬೇರೆ ಮರಳು ಬೆಲೆ ನಿಗದಿಗೊಳಿಸಲಾಗುವುದು ಎನ್ನಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಾನ ರೂಪದ ಮರಳು ಬೆಲೆ ನಿಗದಿಗೊಳಿಸಲು ಚಿಂತನೆ ನಡೆದಿದೆ. ಈ ಹೊಸ ಮರಳು ನೀತಿಯಲ್ಲಿ ಕರಾವಳಿ ಕರ್ನಾಟಕ ಭಾಗಗಳಿಗೆ ಪ್ರತ್ಯೇಕ ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
  • ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮರಳು ಸಾಗಾಟಕ್ಕೆ ಅನುಮತಿ ನೀಡದಿರುವ ಬಗ್ಗೆ ನಿಯಮ ರೂಪಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಇತರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡಬೇಕಾದರೆ ಅನುಮತಿ ಪಡೆಯುವಂತೆ ನೀತಿ ರೂಪಿಸಲಾಗುತ್ತದೆ. ಹೊಸ ಮರಳು ನೀತಿ ಹೂಡಿಕೆದಾರರ ಸ್ನೇಹಿಯಾಗಿರಲಿದ್ದು, ನಿರ್ಮಾಣ ಕಾಮಗಾರಿಗಳಿಗೆ ಅನುಕೂಲಕರವಾಗಿರುವ ನೀತಿಯನ್ನು ರೂಪಿಸಲು ಇಲಾಖೆ ಮುಂದಾಗಿದೆ.
  • ಹಳ್ಳ, ತೊರೆ, ಕೆರೆಗಳಿಂದ ಮರಳು ತೆಗೆಯಲು ಪ್ರತಿಟನ್​ಗೆ 300 ರೂ. ‌ನಿಗದಿ ಪಡಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಮರಳುಗಾರಿಕೆಗಾಗಿ ಸುಮಾರು 183 ಮರಳು ಬ್ಲಾಕ್​ಗಳನ್ನು ಗುರುತಿಸಲಾಗಿದೆ. 1, 2 ಮತ್ತು 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾಪಂ ಮೂಲಕ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ 4, 5 ಮತ್ತು 6ನೇ ಶ್ರೇಣಿಯ ಹೊಳೆ, ನದಿ, ಅಣೆಕಟ್ಟು, ಜಲಾಶಯ, ಬ್ಯಾರೇಜ್ ಹಾಗೂ ಅಣೆಕಟ್ಟಿನ ಹಿನ್ನೀರಿನ ಪ್ರದೇಶಗಳಲ್ಲಿ ಮರಳು ತೆಗೆಯಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಮತ್ತು ಹಟ್ಟಿ ಚಿನ್ನದ ಗಣಿಗೆ ವಹಿಸಲಾಗಿದೆ. ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ 46 ಹಾಗೂ ಹಟ್ಟಿ ಚಿನ್ನದ ಗಣಿ ಶ್ರೇಣಿಯ 43 ಮರಳು ಬ್ಲಾಕ್‍ಗಳಲ್ಲಿ ಗಣಿಗಾರಿಕೆ ನಡೆಸಲು ಆಯಾ ಜಿಲ್ಲಾ ಮರಳು ಸಮಿತಿಗಳಿಂದ ಅಧಿಸೂಚನೆ ಹೊರಡಿಸಲಾಗಿದೆ.

ABOUT THE AUTHOR

...view details