ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹೊಸ ಮರಳು ನೀತಿ 2020 ಜಾರಿ: ಇದರ ವಿಶೇಷತೆ ಏನು? - New sand policy 2020

ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರದಿಂದ ಹೊಸ ಮರಳು ನೀತಿ 2020ನ್ನು ಜಾರಿಗೆ ತರಲಾಗಿದೆ.

Bangalore
ಹೊಸ ಮರಳು ನೀತಿ

By

Published : May 23, 2020, 8:23 AM IST

ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ಬಹುನಿರೀಕ್ಷಿತ ಹೊಸ‌ ಮರಳು ನೀತಿಯನ್ನು ಜಾರಿಗೆ ತಂದಿದೆ.

ರಾಜ್ಯದ ಭೌಗೋಳಿಕ, ಭೂ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ ಮತ್ತು ಸುಲಭವಾಗಿ ಕೈಗೆಟಕುವ ದರದಲ್ಲಿ ಮರಳು ದೊರೆಯುವಂತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹೊಸ ಮರಳು ನೀತಿ, 2020ನ್ನು ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ ಹೊಸ ಮರಳು ನೀತಿ 2020 ಜಾರಿ

ಈ ಹೊಸ ಮರಳು ನೀತಿಯಿಂದ ಈ‌ ಹಿಂದೆ ಟೆಂಡರ್ ಕಂ ಹರಾಜು ಮೂಲಕ ಮರಳು ಗಣಿ ಗುತ್ತಿಗೆ ನೀಡುವ ಪದ್ಧತಿ ಅಂತ್ಯಗೊಳ್ಳಲಿದೆ. ಈ ಹೊಸ ಮರಳು ನೀತಿ ಪ್ರಕಾರ 1, 2, 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಿತ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ.

ಮರಳು ಮಾರಾಟ ದರ ನಿಗದಿ:
ಮೊದಲ, ಎರಡನೇ ಹಾಗೂ ಮೂರನೇ ಶ್ರೇಣಿಯ ಹಳ್ಳ, ತೊರೆ, ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಜಿಲ್ಲಾ ಮರಳು ಸಮಿತಿ ನಿಗದಿ ಪಡಿಸಿದ ದರದಲ್ಲಿ ಗ್ರಾಮ ಪಂಚಾಯತಿ ಮೂಲಕ ಮರಳು ಮಾರಾಟ ಮಾಡಬೇಕು.

ಅದೇ ರೀತಿ 4, 5, 6 ನೇ ಶ್ರೇಣಿಯ ಹೊಳೆ‌ ನದಿಗಳಲ್ಲಿ ಹಾಗೂ ಬ್ಯಾರೇಜ್, ಅಣೆಕಟ್ಟು, ಜಲಾಶಯ ಮತ್ತು ಹಿನ್ನೀರಿನ ಪ್ರದೇಶದಲ್ಲಿ ಸಿಗುವ ಮರಳಿನ ಮಾರಾಟ ದರವನ್ನೂ ಜಿಲ್ಲಾ ಮರಳು ಸಮಿತಿ ನಿಗದಿಗೊಳಿಸಲಿದೆ.

ಮರಳು ವಿಲೇವಾರಿ ಹೇಗೆ?:
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಹಕ ಸ್ವಂತ ಮನೆ‌ ನಿರ್ಮಾಣ, ಸ್ಥಳೀಯ ಸಮುದಾಯಿತ್ವ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದ ನಕ್ಷೆ ಸೇರಿ ದಾಖಲಾತಿಯನ್ನು ಗ್ರಾಮ ಪಂಚಾಯತಿಗೆ ನೀಡಬೇಕು. ನಿಗದಿತ ರಾಜಧನ, ಶುಲ್ಕ ಪಾವತಿಸಿ ಬಳಿಕ ಮರಳು ರವಾನೆ ಪರವಾನಿಗೆ ಪಡೆಯಬೇಕು.

ಮರಳು ಸಾಗಣಿಕೆ ಹೇಗೆ?:
1, 2, 3ನೇ ಶ್ರೇಣಿಯ ಹಳ್ಳ, ತೊರೆ ಮತ್ತು ಕೆರೆಗಳಿಂದ ತೆಗೆದ ಮರಳನ್ನು ಲಘು ವಾಹನಗಳಾದ ಟ್ಯ್ರಾಕ್ಟರ್, ಎತ್ತಿನ ಗಾಡಿ ಮೂಲಕ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಾತ್ರ ಮರಳು ಸಾಗಣಿಗೆ ಮಾಡಬೇಕು.

4, 5, 6 ನೇ ಶ್ರೇಣಿಯ ಹೊಳೆ‌ ನದಿಗಳಲ್ಲಿ ಹಾಗೂ ಬ್ಯಾರೇಜ್, ಅಣೆಕಟ್ಟು, ಜಲಾಶಯ ಮತ್ತು ಹಿನ್ನೀರಿನ ಪ್ರದೇಶದಲ್ಲಿ ಸಿಗುವ ಮರಳನ್ನು ಸ್ಟಾಕ್ ಯಾರ್ಡ್​ಗೆ ಸಾಗಣಿಕೆ ಮಾಡಿ, ಅಲ್ಲಿಂದ ಜಿಪಿಎಸ್ ಅಳವಡಿಸಿರುವ ವಾಹನಗಳ ಮೂಲಕವೇ ಪರವಾನಿಗೆಯೊಂದಿಗೆ ಗ್ರಾಹಕರಿಗೆ ನೀಡಬೇಕು. ಆನ್​ಲೈನ್ ಮೂಲಕವೂ ಗ್ರಾಹಕರಿಗೆ ಮರಳು ಸಾಗಾಟ ಮಾಡಬಹುದಾಗಿದೆ.

ಈ ಮೂಲಕ ಮರಳು ಗಣಿಗಾರಿಕೆ‌, ವಿಲೇವಾರಿಯ ಸಂಪೂರ್ಣ ಹೊಣೆಗಾರಿಕೆಯನ್ನು ವಿವಿಧ ಸರ್ಕಾರಿ ಇಲಾಖೆಗಳಿಗೆ ನೀಡಲಾಗಿದೆ. ಇದರಿಂದ ಖಾಸಗಿ ಗುತ್ತಿಗೆದಾರರ ಪಾತ್ರ ಕಡಿಮೆಯಾಗಲಿದೆ.

ABOUT THE AUTHOR

...view details