ಬೆಂಗಳೂರು:ಮಹಿಳೆಯರ ಸಮಸ್ಯೆ ಬಗೆಹರಿಸಲೆಂದೇ ಇರುವ ನಗರ ಪೊಲೀಸ್ ಆಯುಕ್ತರ ಕಚೇರಿಯ ವನಿತಾ ಸಹಾಯವಾಣಿ ಇದೀಗ ನೂತನ ಯೋಜನೆಯನ್ನ ಕೈಗೊಂಡಿದೆ.
ವನಿತಾ ಸಹಾಯವಾಣಿ ಕಚೇರಿಗೆ ಮಹಿಳೆಯರು ಕುಟುಂಬ ಸಮಸ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಹೀಗೆ ನಾನಾ ಸಮಸ್ಯೆಗಳನ್ನ ಹೊತ್ತು ಬರುತ್ತಾರೆ. ಸಮಸ್ಯೆಗೆ ಒಳಗಾದವರನ್ನ ಕೌನ್ಸೆಲಿಂಗ್ ಮಾಡಿ ಸಮಸ್ಯೆ ಬಗೆಹರಿಸಿ ಅವರಿಗೆ ನ್ಯಾಯ ಒದಗಿಸಿಕೊಡುತ್ತಾರೆ ಈ ವನಿತಾ ಸಹಾಯವಾಣಿಯವರು. ಆದರೆ ಇದೀಗ ನೂತನ ಯೋಜನೆಯನ್ನ ಕೂಡ ತರಲಾಗಿದೆ.
ನೊಂದ ಮಹಿಳೆಯರಿಗೆ ಅಂತಾನೆ ಟೈಲರಿಂಗ್ ಕೈ ಚೀಲ, ಮೊಬೈಲ್ ಪರ್ಸ್, ಕ್ಯಾಂಡಲ್, ರಂಗೋಲಿ, ಹಬ್ಬದ ಗಿಫ್ಟ್ ಐಟಂ, ಸೋಪ್, ಜಿರಳೆ ಔಷಧ ಹೀಗೆ ವಿವಿಧ ರೀತಿಯ ವಸ್ತುಗಳನ್ನ ತಯಾರಿಸುವ ತರಬೇತಿ ನೀಡಿ, ಹಲವಾರು ವಸ್ತುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿಸಿದ್ದಾರೆ.
ವನಿತಾ ಸಹಾಯವಾಣಿಯಿಂದ ನೂತನ ಯೋಜನೆ ಇನ್ನು ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಮಾತನಾಡಿ, ತಮ್ಮ ಕುಟುಂಬದಿಂದ ತೊಂದರೆಗೊಳಗಾದ ಮಹಿಳೆಯರನ್ನ ಆಯ್ಕೆ ಮಾಡಿ ಅವರಿಗೆ ತರಬೇತಿ ಕೊಡಲು ಈ ರೀತಿಯ ಯೋಜನೆ ಮಾಡಿದ್ದೇವೆ. ಇಲ್ಲಿ ಬಹಳ ಮಹಿಳೆಯರು ಆಸಕ್ತಿ ತೋರಿಸಿದ್ದಾರೆ ಎಂದರು.
ಸಮಸ್ಯೆಗೊಳಗಾದ ಮಹಿಳೆ ಪ್ರತಿಕ್ರಿಯಿಸಿ, ನನ್ನ ಜೀವನ ನಿರ್ವಹಣೆ ಮಾಡಲು ಈ ವನಿತಾ ಸಹಾಯವಾಣಿ ಸಹಾಯ ಮಾಡಿದೆ. ಈ ಸಮಾಜದಲ್ಲಿ ನಾನು ಎಲ್ಲರಂತೆ ಜೀವನ ನಡೆಸಲು ದಾರಿ ದೀಪವಾಗಿದೆ ಎಂದು ಹೇಳಿದರು.