ಬೆಂಗಳೂರು :ತಾವೇ ಸ್ವತಃ ಉದ್ಯಮಿಗಳಾಗಿ ಉದ್ಯೋಗ ನೀಡುವಂತಾಗಲು 'ಉದ್ಯಮಿಯಾಗು, ಉದ್ಯೋಗ ನೀಡು' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಸೋಮವಾರ ಹಾಗೂ ಮಂಗಳವಾರ ಬೆಂಗಳೂರಿನ ಅರಮನೆಯಲ್ಲಿ "ಉದ್ಯಮಿಯಾಗು, ಉದ್ಯೋಗ ನೀಡು ಹಾಗೂ ಕೈಗಾರಿಕಾ ಆದಾಲತ್” ಕಾರ್ಯಕ್ರಮ ಸಂಬಂಧ ಪೂರ್ವ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ವಿನೂತನ ಕಾರ್ಯಕ್ರಮದಲ್ಲಿ ಸುಮಾರು 4,800 ವಿದ್ಯಾರ್ಥಿಗಳು ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ.
ಸುಮಾರು 10,000 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯಶಸ್ವಿ ಕೈಗಾರಿಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಅನುಭವ, ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ ಎಂದರು.
ಒಂದು ತಿಂಗಳ ಉಚಿತ ತರಬೇತಿ :ಉದ್ಯಮಿಯಾಗು, ಉದ್ಯೋಗ ನೀಡು ಎಂಬ ಈ ಕಾರ್ಯಕ್ರಮದ ಮೂಲಕ ಉದ್ಯಮಿಯಾಗಲು ಬಯಸುವ ಆಕಾಂಕ್ಷಿಗಳಿಗೆ ಎಲ್ಲಾ ಸೌಲಭ್ಯ, ಸಹಕಾರ, ಬ್ಯಾಂಕ್ ಸಾಲ ಸೇರಿ ಎಲ್ಲಾ ಪೂರಕ ವಾತಾವರಣ ಸೃಷ್ಟಿಸಲಾಗುವುದು. ಜೊತೆಗೆ ಉದ್ಯಮ ಮಾಡಲು ಮುಂದಾಗುವವರಿಗೆ ಒಂದು ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ. ಅವರು ಉದ್ಯಮ ಪ್ರಾರಂಭಿಸಲು ಬೇಕಾದ ಎಲ್ಲಾ ಸೌಲಭ್ಯ, ನೆರವನ್ನು ಸರ್ಕಾರ ನೀಡಲಿದೆ ಎಂದು ವಿವರಿಸಿದರು.
ಬಂಡವಾಳ ಹೂಡಿಕೆದಾರರ ಸಮಾವೇಶ :ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಐಟಿ, ಬಿಟಿ ಸೇರಿ ವಿವಿಧ ಉತ್ಪನ್ನಗಳಲ್ಲಿ ಕರ್ನಾಟಕ ಅತಿ ಹೆಚ್ಚು ರಪ್ತು ಮಾಡುವ ರಾಜ್ಯವಾಗಿದೆ. 2022ರ ನವೆಂಬರ್ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
6 ವಿಭಾಗಗಳಲ್ಲಿ ಕೈಗಾರಿಕಾ ಅದಾಲತ್ :ಸೋಮವಾರ ಹಾಗೂ ಮಂಗಳವಾರ ರಾಜ್ಯದ ಆರು ಕಂದಾಯ ವಿಭಾಗಗಳಲ್ಲಿ ಕೈಗಾರಿಕಾ ಅದಾಲತ್ ಮಾಡಲಾಗುವುದು ಎಂದು ತಿಳಿಸಿದರು. ವಿವಿಧ ಸಮಸ್ಯೆಗಳನ್ನೊಳಗೊಂಡ ಸುಮಾರು 250 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಕೈಗಾರಿಕಾ ಅದಾಲತ್ನಲ್ಲಿ ಬಗೆಹರಿಸಲಾಗುತ್ತದೆ. ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ಕಲಬುರ್ಗಿ, ಮಂಗಳೂರು, ತುಮಕೂರು, ಬೆಳಗಾವಿ ಹಾಗೂ ಮೈಸೂರು ಮತ್ತು ಬೆ.ಗ್ರಾಮಾಂತರದಲ್ಲಿ ಎರಡು ದಿನಗಳ ಕಾಲ ಕೈಗಾರಿಕಾ ಅದಲಾತ್ ಮಾಡಲಾಗುವುದು ಎಂದರು.
ಬಯೋ ಮಾಸ್ ನೀತಿ ರೂಪಿಸಲು ನಿರ್ಧಾರ :ಕರ್ನಾಟಕದಲ್ಲಿ ಬಯೋ ಮಾಸ್ ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಎಥನಾಲ್ ಸೇರಿ ಇತರೆ ಬಯೋ ಉತ್ಪನ್ನಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ಅನುವಾಗುವಂತೆ ನೀತಿ ರೂಪಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿನ ಬಯೋ ಮಾಸ್ ನೀತಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದೆ. ಅದನ್ನು ಹಣಕಾಸು ಇಲಾಖೆಗೂ ಕಳುಹಿಸಿಕೊಡಲಾಗುವುದು. ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ಬಯೋ ಮಾಸ್ ನೀತಿಯ ಅಧ್ಯಯನ ನಡೆಸಿ ರಾಜ್ಯದಲ್ಲೂ ಬಯೋ ಮಾಸ್ ನೀತಿ ಜಾರಿಗೆ ತರಲಾಗುತ್ತದೆ ಎಂದರು.
ಲ್ಯಾಂಡ್ ಬ್ಯಾಂಕ್ ಮಾಡಲು ಸೂಚನೆ :ಕೈಗಾರಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಲ್ಯಾಂಡ್ ಬ್ಯಾಂಕ್ ಸೃಷ್ಟಿಸಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಲ್ಯಾಂಡ್ ಬ್ಯಾಂಕ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇವಲ ಜಿಲ್ಲೆಗಳಲ್ಲಿ ಮಾತ್ರವಲ್ಲ ತಾಲೂಕು ಮಟ್ಟದಲ್ಲೂ ಲ್ಯಾಂಡ್ ಬ್ಯಾಂಕ್ ಮಾಡಲು ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಕನಿಷ್ಟ 1000 ಎಕರೆ ಲ್ಯಾಂಡ್ ಬ್ಯಾಂಕ್ ಇರಬೇಕು. ಬೆಂಗಳೂರು ಮಗರದಲ್ಲಿ 25,000 ಲ್ಯಾಂಡ್ ಬ್ಯಾಂಕ್ ರಚಿಸಲು ತಿಳಿಸಲಾಗಿದೆ ಎಂದರು.
ಸುಮಾರು 1.50 ಲಕ್ಷ ಎಕರೆ ಲ್ಯಾಂಡ್ ಬ್ಯಾಂಕ್ ಸಿದ್ಧವಿದೆ. ಲ್ಯಾಂಡ್ ಬ್ಯಾಂಕ್ ಇದ್ದರೆ, ಕೈಗಾರಿಕೆಗಳು ಉದ್ಯಮ ಸ್ಥಾಪಿಸಲು ಮುಂದೆ ಬರುತ್ತಾರೆ. ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ಮಾಡಲು ಉದ್ದೇಶಿಲಾಗಿತ್ತು. ಆದರೆ, ಅಲ್ಲಿ 1,000 ಎಕರೆ ಜಮೀನು ಸಿಗದೇ ಇದ್ದ ಕಾರಣ ಅದನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಬೇಕಾಗಿದೆ ಎಂದು ತಿಳಿಸಿದರು.