ಬೆಂಗಳೂರು : ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಒಂದು ಹೊಸ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಇಂದು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಬಿ ಎಸ್ ಬೊಮ್ಮಾಯಿ ಮಾತನಾಡಿದರು.
ಸಿಬಿಎಸ್‌ಇ ಮಾದರಿಯಲ್ಲೇ ಗುಣಮಟ್ಟದ ಶಿಕ್ಷಣವನ್ನು ವಸತಿ ಶಾಲೆಗಳಲ್ಲಿ ನೀಡಲು ಉನ್ನತ್ತೀಕರಣಗೊಳಿಸುವ ಬಗ್ಗೆ ಗಮನಹರಿಸಲಾಗುವುದು. ಆಗ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಆ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ದೊರಕುವಂತಾಗುತ್ತದೆ.
ಹಾಗೆಯೇ ಸ್ವಉದ್ಯೋಗದ ಜೊತೆಗೆ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಪಡೆಯಬೇಕು ಮತ್ತು ಉದ್ಯೋಗಿ ಹಾಗೂ ಉದ್ಯಮಿಗಳೂ ಆಗಬೇಕು ಎಂಬ ನಿಟ್ಟಿನಲ್ಲಿ ಹೊಸ ಗುಣಾತ್ಮಕ ನೀತಿ ರೂಪಿಸುವುದಾಗಿ ಹೇಳಿದರು.
ಸಿಇಟಿ ಮತ್ತು ನೀಟ್ ಪರೀಕ್ಷೆಗಳನ್ನು ಆತ್ಮಸ್ಥೈರ್ಯಗಳಿಂದ ಬರೆಯುವಂತೆ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು. 8.50 ಲಕ್ಷ ವಿದ್ಯಾರ್ಥಿಗಳಿಗೆ 625 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ಹಿಂದುಳಿದ ವರ್ಗದ ವತಿಯಿಂದ ನೀಡಲಾಗುತ್ತಿದೆ. ಸ್ವಉದ್ಯೋಗಕ್ಕೂ ಸಾಕಷ್ಟು ಸಹಾಯ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸ್ವಉದ್ಯೋಗ ಕಲ್ಪಿಸಲು 83 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದರು.
ಅಲೆಮಾರಿ ಜನಾಂಗದ ವಸತಿ ಶಾಲೆ :ಈ ವರ್ಷ ಮೂರು ಅಲೆಮಾರಿ ಜನಾಂಗದ ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ಈಗಾಗಲೇ ನಾಲ್ಕು ಶಾಲೆಗಳಿದ್ದು, ಎರಡು ಶಾಲೆಗಳಿಗೆ ಕಟ್ಟಡವಿಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಎರಡು ವಸತಿ ಶಾಲೆಗಳಿಗೆ ತಲಾ 6 ಕೋಟಿ ರೂ. ನೀಡಲಾಗುವುದು.
ವಿಶ್ವವಿದ್ಯಾಲಯಗಳಲ್ಲಿ ಅಲೆಮಾರಿ ಜನಾಂಗದ ಸಂಸ್ಕೃತಿ ಅಧ್ಯಯನಕ್ಕೂ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಧಾನಮಂತ್ರಿಗಳು ಸಿಇಟಿ ಮತ್ತು ನೀಟ್‍ನಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಲಭ್ಯ ಕಲ್ಪಸಿದ್ದಾರೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.