ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಸರ್ಕಸ್ ಆರಂಭಗೊಂಡಿದೆ. ಪ್ರಮುಖ ಖಾತೆಗಳಿಗೆ ಪ್ರಭಾವಿ ಸಚಿವರಿಂದ ಲಾಬಿ ನಡೆಯುತ್ತಿದ್ದು, ಕೆಲವರ ಖಾತೆಯೂ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಳೆದು ತೂಗಿ ಮೂರನೇ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಜನವರಿ 13ರಂದು ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ಖಾತೆಗಳ ಹಂಚಿಕೆ ಮಾತ್ರ ಇನ್ನು ಆಗಿಲ್ಲ. ಕೆಲ ಸಚಿವರು ಪ್ರಮುಖ ಖಾತೆಗೆ ಪಟ್ಟು ಹಿಡಿದಿರುವುದೇ ಇದಕ್ಕೆ ಕಾರಣ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ 10ಕ್ಕೂ ಹೆಚ್ಚಿನ ಖಾತೆಗಳಿವೆ. ಹಣಕಾಸು, ಗುಪ್ತಚರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸೇರಿ ಕೆಲ ಮಹತ್ವದ ಖಾತೆ ಹೊರತುಪಡಿಸಿ ಇತರ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ ಬಳಿಯಲ್ಲಿಯೂ ಐದಕ್ಕಿಂತ ಹೆಚ್ಚಿನ ಖಾತೆ ಇದ್ದು, ಅದರಲ್ಲಿಯೂ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.
ಸಿಎಂ ಬಳಿ ಇರುವ ಖಾತೆಗಳು:
ಹಣಕಾಸು ಇಲಾಖೆ, ಗುಪ್ತಚರ, ಇಂಧನ, ಬೆಂಗಳೂರು ನಗರಾಭಿವೃದ್ಧಿ, ಪ್ರವಾಸೋದ್ಯಮ, ಅಬಕಾರಿ, ಕ್ರೀಡೆ ಮತ್ತು ಯುವಜನ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಿಂದುಳಿದ ವರ್ಗಗಳ ಕಲ್ಯಾಣ, ಯೋಜನೆ ಮತ್ತು ಸಾಂಖ್ಯಿಕ ಅಂಕಿ ಅಂಶಗಳ ಖಾತೆ, ವಾರ್ತ ಮತ್ತು ಪ್ರಚಾರ ಇಲಾಖೆ, ಸಣ್ಣ ಕೈಗಾರಿಕಾ ಇಲಾಖೆ.
ಬೆಂಗಳೂರು ಅಭಿವೃದ್ಧಿಗೆ ಪೈಪೋಟಿ:
ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಕಳೆದ ಬಾರಿ ಸಂಪುಟ ವಿಸ್ತರಣೆಯಾದಾಗಲೂ, ಅಶ್ವತ್ಥನಾರಾಯಣ್, ಅಶೋಕ್, ಬೈರತಿ ಬಸವರಾಜ್ ಖಾತೆಗೆ ಲಾಬಿ ನಡೆಸಿದ್ದರು. ಅಂತಿಮವಾಗಿ ಸಿಎಂ ತಮ್ಮ ಬಳಿಯೇ ಖಾತೆ ಉಳಿಸಿಕೊಂಡು ಅಸಮಾಧಾನ ಭುಗಿಲೇಳದಂತೆ ಮಾಡಿದ್ದರು. ಆದರೆ, ಈಗ ಯಾರಿಗಾದರೂ ಒಬ್ಬರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ ಹಾಗಾಗಿ ಸಚಿವರ ನಡುವೆ ಪೈಪೋಟಿ ಹೆಚ್ಚಾಗಿದೆ.
ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಎದುರಾಗಲಿದ್ದು, ಚುನಾವಣಾ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವಂತೆ ಕಂದಾಯ ಸಚಿವ ಆರ್.ಅಶೋಕ್ ಪಟ್ಟು ಹಿಡಿದಿದ್ದಾರೆ. ನೂತನ ಸಚಿವ ಅರವಿಂದ ಲಿಂಬಾವಳಿ ಕೂಡ ಇದೇ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಗೊಂದಲಕ್ಕೆ ಸಿಲುಕಿದ್ದಾರೆ.
ಗೃಹ ಖಾತೆ ಲೆಕ್ಕಾಚಾರ:
ಗೃಹ ಸಚಿವ ಬಸವರಾಜ ಬೊಮ್ಮಾಯಿ ಬದಲಾವಣೆಗೆ ರಾಜ್ಯ ಬಿಜೆಪಿ ಒತ್ತಾಯ ಮಾಡಿದೆ ಎನ್ನಲಾಗುತ್ತಿದೆ. ನೂತನ ಸಚಿವ ಅರವಿಂದ ಲಿಂಬಾವಳಿಗೆ ಗೃಹ ಖಾತೆ ಕೊಡಬೇಕು, ಗೃಹ ಖಾತೆ ತೊರೆಯುವ ಬೊಮ್ಮಾಯಿಗೆ ಕಂದಾಯ ಇಲಾಖೆ ಜವಾಬ್ದಾರಿ ನೀಡಬೇಕು ಎನ್ನುವ ಸಲಹೆಯನ್ನೂ ನೀಡಲಾಗಿದೆ. ಇದಕ್ಕೆ ಬೊಮ್ಮಾಯಿ ಸಹಮತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಸಿಎಂ ಒಪ್ಪುವುದು ಅನುಮಾನವಾಗಿದೆ.
ಹೊಸ ಸಚಿವರ ಬೇಡಿಕೆಗೆ ಹಳೆ ಸಚಿವರು ಸುಸ್ತು: