ಬೆಂಗಳೂರು:ಸಿಎಂ ಒಂದೆಡೆ ಗ್ರಾಮ ವಾಸ್ತವ್ಯದಲ್ಲಿ, ಡಿಸಿಎಂ ಇನ್ನೊಂದೆಡೆ ಜನಸಂಪರ್ಕ ಸಭೆಯಲ್ಲಿ ನಿರತರಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಅಧಿಕಾರಿಗಳೂ ಶಕ್ತಿಸೌಧದಿಂದ ದೂರವೇ ಇದ್ದಾರೆ. ಹೀಗಿರುವ ಸಂದರ್ಭದಲ್ಲಿ ಸಚಿವ ಸ್ಥಾನ, ಕೋಣೆ ಪಡೆದ ನೂತನ ಸಚಿವರಿಬ್ಬರು ಮಾತ್ರ ಖಾತೆ ಸಿಗದೇ ಪರದಾಡುವಂತಾಗಿದೆ.
ಸಚಿವರಾಗಿ ವಾರ ಕಳೆದರೂ, ಖಾತೆ ಭಾಗ್ಯ ಮಾತ್ರ ಸಚಿವರಾದ ಆರ್. ಶಂಕರ್ ಮತ್ತು ಹೆಚ್. ನಾಗೇಶ್ ಅವರಿಗೆ ಸಿಕ್ಕಿಲ್ಲ. ಜೂ.14ರಂದೇ ಇಬ್ಬರೂ ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದಾರೆ. ಜೂ.19ರಂದು ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿ ಕೂಡ ನೀಡಲಾಗಿದೆ.
ಆದರೆ, ಇವರಿಗೆ ಖಾತೆ ಹಂಚಿಕೆ ಮಾಡಬೇಕಾಗಿರುವ ಸಿಎಂ ಗ್ರಾಮ ವಾಸ್ತವ್ಯದಲ್ಲಿದ್ದಾರೆ. ಆದೇಶ ಪ್ರಕಟಿಸಬೇಕಿದ್ದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರೊಂದಿಗೇ ಇದ್ದಾರೆ. ಉಭಯ ಸಚಿವರಿಗೆ ಸಂಜೆಯೊಳಗೆ ಖಾತೆ ಹಂಚಿಕೆ ಮಾಡುವುದಾಗಿ ಶುಕ್ರವಾರ ತಿಳಿಸಿದ್ದ ಸಿಎಂ ಕುಮಾರಸ್ವಾಮಿ ಕೊನೆಯ ಕ್ಷಣದವರೆಗೂ ಸಹಿ ಮಾಡದೇ ಗ್ರಾಮವಾಸ್ತವ್ಯಕ್ಕೆ ತೆರಳಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಸಚಿವರು (ಸಂಗ್ರಹ ಚಿತ್ರ) ಇಂದು ಖಾತೆ ಹಂಚಿಕೆ ಅಸಾಧ್ಯ. ನಾಳೆ ಭಾನುವಾರವಾಗಿರುವ ಕಾರಣ ಸಚಿವರಿಗೆ ಖಾತೆ ಭಾಗ್ಯ ಸಿಗುವುದು ಅನುಮಾನ. ಸದ್ಯ ಸಚಿವರಾಗಿರುವ ಶಂಕರ್ಗೆ ವಿಧಾನಸೌಧದಲ್ಲಿ 237 ಮತ್ತು 238ನೇ ಸಂಖ್ಯೆಯ ಕೊಠಡಿ ನೀಡಲಾಗಿದೆ. ಹೆಚ್. ನಾಗೇಶ್ಗೆ ವಿಕಾಸೌಧದಲ್ಲಿ 133 ಮತ್ತು 134ನೇ ಸಂಖ್ಯೆಯ ಕೊಠಡಿ ನೀಡಲಾಗಿದೆ.
ಸಿಎಂ ವಿಳಂಬವೇಕೆ?
ಸಚಿವರಿಗೆ ಖಾತೆ ಹಂಚುವಲ್ಲಿ ಸಿಎಂ ಏಕೆ ಇಷ್ಟೊಂದು ವಿಳಂಬ ಮಾಡುತ್ತಿದ್ದಾರೆ ಎಂಬ ಕುರಿತು ಸಾಕಷ್ಟು ಜಿಜ್ಞಾಸೆ ಮೂಡುತ್ತಿದೆ. ಇನ್ನೊಂದೆಡೆ ಹೊಸ ಸಚಿವರು ತಾವು ಬಯಸುವ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸಚಿವರ ಪಟ್ಟು ಸಡಿಲಿಸಲಿ ಎನ್ನುವ ಕಾರಣಕ್ಕೆ ಸಿಎಂ ಈ ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಕಡೆಯಿಂದ ಸಚಿವರಾಗಿರುವ ಆರ್. ಶಂಕರ್ಗೆ ಪೌರಾಡಳಿತ ನೀಡಲು ನಿರ್ಧರಿಸಲಾಗಿದೆ. ಆದರೆ, ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಹೆಚ್. ನಾಗೇಶ್ಗೆ ಪ್ರಾಥಮಿಕ ಶಿಕ್ಷಣ ಖಾತೆ ನೀಡಲು ಸಿಎಂ ನಿರ್ಧರಿಸಿದ್ದರು. ಹಿಂದೆ ಈ ಖಾತೆ ವಹಿಸಿಕೊಂಡಿದ್ದ ಎನ್. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅದೇ ಖಾತೆಯನ್ನು ನಾಗೇಶ್ಗೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ನಾಗೇಶ್ ಅಬಕಾರಿ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಸದ್ಯ ಶಿಕ್ಷಣ ಹಾಗೂ ಅಬಕಾರಿ ಖಾತೆ ಸಿಎಂ ಬಳಿಯೇ ಇದ್ದು, ಅಬಕಾರಿ ಬಿಟ್ಟುಕೊಡಲು ಸಿಎಂಗೆ ಮನಸ್ಸಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಮಹೇಶ್ ಅವರಿಂದ ಖಾಲಿಯಾಗಿರುವ ಶಿಕ್ಷಣ ಖಾತೆಯನ್ನು ನಾಗೇಶ್ಗೆ ಹಾಗೂ ಸಿ.ಎಸ್. ಶಿವಳ್ಳಿ ಅವರಿಂದ ತೆರವಾಗಿದ್ದ ಪೌರಾಡಳಿತವನ್ನು ಆರ್. ಶಂಕರ್ಗೆ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಇದಕ್ಕೆ ಅವರು ಒಪ್ಪಿದರೆ ಮುಂದಿನ ಆದೇಶ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ.