ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):2008ರಲ್ಲಿ ಪ್ರಾರಂಭವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಲ್ಲಿಯವರೆಗೂ 300 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಮೂಲಕ ಕೆಐಎಎಲ್ ಹೊಸ ಮೈಲಿಗಲ್ಲು ಸಾಧಿಸಿದೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದು. ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಸಹ ಪಾತ್ರವಾಗಿದೆ. 2009 ಮೇ 24 ರಂದು ಮುಂಬೈನಿಂದ ಬಂದ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮೂಲಕ ವಿಮಾನಯಾನ ಸೇವೆ ಆರಂಭವಾಗಿದೆ.
ಸರಕು ಸಾಗಣೆ ಮತ್ತು ವಿಮಾನಯಾನ ಸೇವೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲಾಗಿದೆ. 2012ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 50 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರು. 2016ರಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 100 ಮಿಲಿಯನ್ಗೆ ತಲುಪಿತು. 2022ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 250 ಮಿಲಿಯನ್ಗೆ ತಲುಪಿತ್ತು.
2019ರ ಒಂದೇ ವರ್ಷದೊಳಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ 33 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದು, ದಾಖಲೆಯಾಗಿತ್ತು. 2023ನೇ ವರ್ಷಕ್ಕೆ 300 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಕೆಐಎಎಲ್ ಹೊಸ ಮೈಲಿಗಲ್ಲು ಸಾಧಿಸಿದೆ.
ಪ್ರಯಾಣಿಕರಿಗಾಗಿ 420ಮೀಟರ್ ಎಲಿವೇಟೆಡ್ ವಾಕ್‌ವೇ:ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 420 ಮೀಟರ್ ಉದ್ದದ ಎಲಿವೇಟೆಡ್ ವಾಕ್ ವೇ ಇತ್ತೀಚೆಗೆ ಆರಂಭಿಸಲಾಗಿತ್ತು. ಇದರಿಂದ ಪ್ರಯಾಣಿಕರು ಟರ್ಮಿನಲ್ 1ರಿಂದ ಪಾರ್ಕಿಂಗ್ 4 ಕಡೆಗೆ ಹೋಗಲು ಅನುಕೂಲವಾಗುತ್ತದೆ. ಟರ್ಮಿನಲ್ 1ರಿಂದ P4 ಪಾರ್ಕಿಂಗ್ ಪ್ರದೇಶಕ್ಕೆ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಅರಾಮದಾಯಕ ಅನುಭವ ಒದಗಿಸಲು 420 ಮೀ. ನಡಿಗೆ ಮಾರ್ಗವನ್ನು ಸಿದ್ಧಪಡಿಸಲಾಗಿದೆ.
ಕಾಲ್ನಡಿಗೆಯ ನಯವಾದ ಹಾಗೂ ವಿನೂತನ ವಿನ್ಯಾಸದೊಂದಿಗೆ, ಎಲಿವೇಟರ್, ಎಸ್ಕಲೇಟರ್‌ಗಳನ್ನು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ಪ್ರಯಾಣಿಕರು ಸುಲಭ ಹಾಗೂ ಆರಾಮದಾಯಕವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಹಿರಿಯ ನಾಗರಿಕರಿಗೆ ಹಾಗೂ ಪಿಆರ್ಎಂ (ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು)ಗೆ ಎಲಿವೇಟೆಡ್ ವಾಕ್ ವೇ ತುಂಬಾ ಅನುಕೂಲವಾಗಲಿದೆ. ರಾತ್ರಿ ಸಮಯದಲ್ಲೂ ವಾಕ್ ವೇಯಲ್ಲಿ ಯಾವುದೇ ಭಯವಿಲ್ಲದೆ ಸಂಚರಿಸಲು ಸುರಕ್ಷತೆಯ ವಾತಾವರಣ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ:'ಆನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಉದ್ಯಮದಲ್ಲಿ ಬೆಂಗಳೂರು ಜಾಗತಿಕ ಕೇಂದ್ರ'