ಬೆಂಗಳೂರು: ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಕುರಿತು ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯಲ್ಲಿ ಕೆಲವು ಯೋಜನೆಗಳನ್ನು ರೂಪಿಸಿದೆ.
ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಸಾಲದ ಮೇಲೆ ಬಡ್ಡಿ ಸಹಾಯಧನ ನೀಡಲಾಗುತ್ತಿದೆ. ಉದ್ಯಮಶೀಲರು ಕೈಗಾರಿಕಾ ಘಟಕದ ತಂತ್ರಜ್ಞಾನ ಮೇಲ್ದರ್ಜೆಗೇರಿಸಲು, ಯಂತ್ರೋಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಸಿಎಂ ಸಿಎಸ್ಎಸ್ (ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಂ-ಸಾಲ ಸಂಯೋಜಿತ ಬಂಡವಾಳ ಸಹಾಯಧನ ಯೋಜನೆ) ಅಡಿಯಲ್ಲಿ ಕೆಎಸ್‌ಎಫ್‌ಸಿ ಮತ್ತು ಅನುಸೂಚಿತ (ಷೆಡ್ಯೂಲ್ಡ್) ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲಗಳಿಗೆ ಶೇ. 5ರಂತೆ 5ರಿಂದ 6 ವರ್ಷಗಳ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.
ಸಾಮಾನ್ಯ ವರ್ಗದವರಿಗೆ:
ವಲಯ 1: ಶೇ. 5- 6 ವರ್ಷದವರೆಗೆ
ವಲಯ 2: ಶೇ. 5 - 5 ವರ್ಷದವರೆಗೆ
ವಲಯ 3: ಶೇ. 5 - 5 ವರ್ಷದವರೆಗೆ ಬಡ್ಡಿ ದರ ನಿಗದಿಪಡಿಸಲಾಗಿದೆ.
ವಿಶೇಷ ವರ್ಗದವರಿಗೂ (ವಿಶೇಷ ಪ್ರವರ್ಗ) ಬಡ್ಡಿ ದರ ನಿಗದಿಪಡಿಸಲಾಗಿದೆ. (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಾಂಗರು ಹಾಗೂ ನಿವೃತ್ತ ಸೈನಿಕ ಉದ್ಯಮಿಗಳು).
ಸಹಾಯಧನ:
ದೇಶದಲ್ಲಿ ಮಾನ್ಯತೆ ಪಡೆದ 43 ಪ್ರಯೋಗಾಲಯಗಳಿಂದ ತಂತ್ರಜ್ಞಾನವನ್ನು ಪಡೆದು ತಮ್ಮ ಕೈಗಾರಿಕೆಗಳಿಗೆ ಅಳವಡಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅದರ ವೆಚ್ಚದ ಶೇ. 25ರಷ್ಟು (ಗರಿಷ್ಠ 50 ಸಾವಿರ ರೂ.) ಸಹಾಯಧನ ನೀಡಲು ಸರ್ಕಾರ ಉದ್ದೇಶಿಸಿದೆ.
ಸಣ್ಣ ಕೈಗಾರಿಕಾ ವಲಯದಲ್ಲಿ ಆಧುನಿಕ ರೀತಿ-ನೀತಿ ಅನುಸರಣೆ ಮತ್ತು ಅನುಷ್ಠಾನದ ಕುರಿತು ಸರ್ಕಾರವು ಹೊಸ ಕೈಗಾರಿಕಾ ನೀತಿ -2020-25ರಲ್ಲಿ ಕೆಲವು ಯೋಜನೆಗಳನ್ನು ಅಳವಡಿಸಿದೆ.
ಉತ್ಕೃಷ್ಟ ಕೇಂದ್ರ:
ಕೈಗಾರಿಕಾ ಸಂಘಟನೆಗಳು ಅಗತ್ಯ ಸಾಮರ್ಥ್ಯ ಹೊಂದಿದ ಸಂಸ್ಥೆಗಳು ಹಾಗೂ ರಾಜ್ಯದ ಶ್ರೇಷ್ಠ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದಲ್ಲಿ ಕೈಗಾರಿಕೆ 4.0ರ ಉತ್ಕೃಷ್ಠ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಬೆಂಗಳೂರು ಮತ್ತು ಇತರೆ ಪ್ರಾದೇಶಿಕ ಕೇಂದ್ರಗಳಿಗಾಗಿ ರಾಜ್ಯವು 100.00 ಕೋಟಿ ರೂ. ಅನುದಾನ ನೀಡಲಿದೆ. ಆದರೆ ಈ ಉತ್ಕೃಷ್ಟ ಕೇಂದ್ರಗಳು ಪ್ರಸ್ತುತ ಇರುವ ಕಟ್ಟಡಗಳನ್ನೇ ಬಳಸಬೇಕಿದ್ದು, ಯಾವುದೇ ಹೊಸ ನಿರ್ಮಾಣವನ್ನು ಪರಿಗಣಿಸಲಾಗದು.
ನೇರ ಡಿಜಿಟಲ್ ಉತ್ಪಾದನೆಗೆ ಸಹಾಯಧನ:
ರಾಜ್ಯದಲ್ಲಿ ಮೊದಲ 5 ಘಟಕಗಳಿಗೆ ನೀತಿ ಅವಧಿಯಲ್ಲಿ ಕೈಗಾರಿಕಾ ಸಂಘಟನೆಗಳು/ ಸಾಮರ್ಥ್ಯವುಳ್ಳ ಸಂಸ್ಥೆಗಳ ನೆರವಿನೊಂದಿಗೆ ಪ್ರತಿ ಕೇಂದ್ರಕ್ಕೆ 500.00 ಲಕ್ಷ ರೂ.ಗೆ ಸೀಮಿತವಾಗಿ ಶೇ. 50ರಷ್ಟು ಬಂಡವಾಳ ಸಹಾಯಧನ ನೀಡಲಾಗುತ್ತದೆ. ಕೈಗಾರಿಕಾ ಸಂಘಟನೆಗಳು/ಸಂಸ್ಥೆಗಳು ಈ ಸಾಮಾನ್ಯ ಸೌಕರ್ಯಗಳನ್ನು ನಿರ್ವಹಿಸಲಿದ್ದು, ಪ್ರತಿ ಬಳಕೆಗೆ ಪಾವತಿ ಆಧಾರದಲ್ಲಿ ಉಗ್ರಾಣ/ ಭಂಡಾರಗಳಾಗಿ ಕಾರ್ಯನಿರ್ವಹಿಸಲಿವೆ.
ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆದಿರುವ ಯುವಕ-ಯುವತಿಯರಿಗೆ ಮಾರ್ಗದರ್ಶನ ನೀಡಲು ಹಾಗೂ ಅವರುಗಳು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವಂತೆ ಮಾಡಲು ಸರ್ಕಾರವು ಹೊಸ ಕೈಗಾರಿಕಾ ನೀತಿಯಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೊಸ ತಲೆಮಾರಿನ ಉದ್ಯಮಿಗಳನ್ನು ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಉದ್ಯಮಶೀಲತೆ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಕ್ರಮ, ನಿರ್ದಿಷ್ಟ ಕ್ಷೇತ್ರದ ಸಂಬಂಧಿ ಕೌಶಲ್ಯ ಕಾರ್ಯಕ್ರಮಗಳು, ಪ್ರಾಯೋಗಿಕ ತರಬೇತಿ, ಮಾರ್ಗದರ್ಶನಗಳನ್ನು ಟೆಕ್ಸಾಕ್/ಜಿಲ್ಲಾ ಕೈಗಾರಿಕಾ ಕೇಂದ್ರಗಳಿಂದ ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ.
ನಿರ್ದಿಷ್ಟ ವಲಯದ ಕೌಶಲ್ಯಗಳಿಗಾಗಿ ಸಾಂಸ್ಥಿಕ ಸಹಯೋಗ ಎಲ್ಲ ವಲಯಗಳಲ್ಲಿ ನಿರ್ದಿಷ್ಟ ವಲಯದ ಉನ್ನತ ಕೌಶಲ್ಯ ಮತ್ತು ಕೌಶಲ್ಯ ಹೆಚ್ಚಳಕ್ಕಾಗಿ ಸಾಂಸ್ಥಿಕ ಸಹಯೋಗ/ ವೃತ್ತಿ ತರಬೇತಿ ಸಂಸ್ಥೆಗಳು ಕೈಗಾರಿಕಾ ಸಂಘಟನೆಗಳ ಸಹಯೋಗದೊಂದಿಗೆ ಸ್ಥಾಪಿಸಲು ಉಪಕರಣಗಳು ಮತ್ತು ಯಂತ್ರೋಪಕರಣಗಳ ವೆಚ್ಚದ ಮೇಲೆ ಶೇ. 50ರಷ್ಟು ಬಂಡವಾಳ ಸಹಾಯಧನಕ್ಕೆ ಅರ್ಹವಾಗಿದ್ದು, ಗರಿಷ್ಠ ಮಿತಿ 15 ಲಕ್ಷ ರೂ. ಆಗಿರುತ್ತದೆ.
ಅಗತ್ಯವಿದ್ದಲ್ಲಿ ರಾಜ್ಯವು ಸಹಾಯಕರ ಪಾತ್ರ ನಿರ್ವಹಿಸಲಿದೆ. ಈ ಬಂಡವಾಳ ಸಹಾಯಧನವು ನೀತಿಯ ಅವಧಿಯಲ್ಲಿ ವರ್ಷಕ್ಕೆ ಕೇವಲ ಎರಡು ಘಟಕಗಳಿಗೆ ಮಾತ್ರ ಸೀಮಿತವಾಗಿದೆ.