ಬೆಂಗಳೂರು:ಶೀಘ್ರದಲ್ಲೇ ನೂತನ ಕೈಗಾರಿಕಾ ನೀತಿ ಜಾರಿಗೆ ತರಲು ಉದ್ದೇಶಿಸಿದ್ದು, ಇದರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಹಲವು ಒತ್ತಾಸೆಯ ತೀರ್ಮಾನಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಆರ್ಥಿಕತೆ ಸುಧಾರಣೆಗಾಗಿ ಎಂಎಸ್ಎಂಇ ವಲಯದ ಬೆಳವಣಿಗೆಗೆ ಒತ್ತು ನೀಡುವ ಸಂಬಂಧ ವಿಧಾನಸೌಧದಲ್ಲಿ 'ಗೇಮ್' ರಾಷ್ಟ್ರೀಯ ಟಾಸ್ಕ್ ಫೋರ್ಸ್ ಇಂದು ಆಯೋಜಿಸಿದ್ದ ವರ್ಚುಯಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯದ ಕೋವಿಡ್ ಸಂಕಷ್ಟದ ಸನ್ನಿವೇಶದಿಂದ ಹೊರ ಬರಲು ಕೈಗಾರಿಕಾ ವಲಯದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕಿದೆ. ಅದಕ್ಕಾಗಿ ಭೂ ಸುಧಾರಣಾ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಯಲ್ಲಿ ಸುಧಾರಣೆ ತರಲಾಗಿದೆ. ಜೊತೆಗೆ ಕೈಗಾರಿಕಾ ಸೌಲಭ್ಯಗಳ ಅಧಿನಿಯಮದಲ್ಲೂ ತಿದ್ದುಪಡಿಗೆ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಕಟ್ಟಡ ಪ್ಲಾನ್, ಪರವಾನಗಿ ಹಾಗೂ ನಾನಾ ಇಲಾಖೆಗಳ ಅನುಮತಿ ನಿರೀಕ್ಷಿಸಿ ಮೊದಲೇ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಆರ್ಥಿಕ ಕೊರತೆ, ಕೊರೊನಾ ಸಂಕಷ್ಟದಂತಹ ಸದ್ಯದ ಸನ್ನಿವೇಶದಲ್ಲಿ ಕೈಗಾರಿಕಾ ಬೆಳವಣಿಗೆಗೆ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮ ವಲಯ (ಎಂಎಸ್ಎಂಇ) ಬಲಪಡಿಸಲು ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ ಎಂದರು. ಎಂಎಸ್ಎಂಇ ಆರ್ಥಿಕತೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವ ಪ್ರಧಾನಿ ಮೋದಿ ಅವರ ಸೂಚನೆಯಂತೆ ಈ ವಲಯಕ್ಕೆ ನಮ್ಮ ಸರ್ಕಾರ ಎಲ್ಲಾ ಅಗತ್ಯ ಸಹಕಾರ ಮತ್ತು ಬೆಂಬಲ ನೀಡಲಿದೆ ಎಂದು ಹೇಳಿದರು.
ಎಂಎಸ್‌ಎಂಇಅನ್ನು ಕರ್ನಾಟಕಕ್ಕೆ ಘೋಷಣೆ ಮಾಡಿ ಸಹಕಾರ ನೀಡಿರುವುದಕ್ಕೆ ಗಡ್ಕರಿ ಅವರಿಗೆ ಧನ್ಯವಾದ ತಿಳಿಸಿದ ಬಿಎಸ್ವೈ, ಪ್ರಮುಖವಾಗಿ ಹಲವು ರಸ್ತೆಗಳು, ಮೇಲ್ಸೇತುವೆಗಳ ಸಂಪರ್ಕ ಸಾಧಿಸಲು ಕೇಂದ್ರ ಸಚಿವರು ಸಹಕಾರ ನೀಡಿದ್ದಾರೆ. ಅಲ್ಲದೆ ಬೆಂಗಳೂರು ನಗರಕ್ಕೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯನ್ನು ಘೋಷಣೆ ಮಾಡಿರುವುದರಿಂದ ವಾಹನ ದಟ್ಟಣೆ ಕಡಿಮೆ ಆಗುತ್ತದೆ ಎಂದರು. ಇದಕ್ಕೂ ಮುನ್ನ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಂದು 'ಗೇಮ್ ' ರಾಷ್ಟ್ರೀಯ ಟಾಸ್ಕ್ ಫೋರ್ಸ್ ಆಯೋಜಿಸಿದ್ದ ಆರ್ಥಿಕತೆ ಸುಧಾರಿಸುವ ಸಂಬಂಧ ಎಂ.ಎಸ್.ಎಂ.ಇ. ಬೆಳವಣಿಗೆ ಕುರಿತ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮೇಘಾಲಯ, ಪಂಜಾಬ್ ಹಾಗೂ ಉತ್ತರಾಖಂಡ್ ಮುಖ್ಯಮಂತ್ರಿಗಳು ವರ್ಚುಯಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.