ಬೆಂಗಳೂರು:ಹೊಸ ಕೈಗಾರಿಕಾ ನೀತಿಯಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಬರುವ ನಿರೀಕ್ಷೆ ಇಟ್ಟುಕೊಂಡಿದ್ದು, ನೂತನ ಕೈಗಾರಿಕಾ ನೀತಿ ಜಾರಿಗೆ ತಂದಿದ್ದೇವೆ. ಇದರಿಂದ 20 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನೂತನ ಕೈಗಾರಿಕಾ ನೀತಿ ಜಾರಿಯಿಂದ 20 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ: ಸಚಿವ ಜಗದೀಶ್ ಶೆಟ್ಟರ್ ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೈಗಾರಿಕಾ ವಲಯದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಜ್ಯವನ್ನು ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಕೈಗಾರಿಕಾ ನೀತಿ ಅನುಕೂಲವಾಗಲಿದೆ ಎಂದರು.
ಕೈಗಾರಿಕಾ ಬೆಳವಣಿಗೆ ಪ್ರತಿವರ್ಷ ಶೇ.10ರಷ್ಟು ಮಾಡುವ ಉದ್ದೇಶ ಇದೆ. ಹೊಸ ತಂತ್ರಜ್ಞಾನ ಅಳವಡಿಸಲು ಈ ರೀತಿಯಲ್ಲಿ ಅವಕಾಶ ಕೊಡಲಾಗಿದೆ ಹಿಂದುಳಿದ ಪ್ರದೇಶಗಳಲ್ಲಿ ಬಂಡವಾಳಗಳ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆಟೋಮೊಬೈಲ್ ಡಿಫೆನ್ಸ್ ಎಲೆಕ್ಟ್ರಿಕ್ ವೆಹಿಕಲ್ ಮೆಡಿಕಲ್ ಡಿವೈಸಸ್ ರಿನಿವಲ್ ಎನರ್ಜಿ ಕ್ಷೇತ್ರದ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಂಎಸ್ ಎಂಇ ಗಳ ಅಭಿವೃದ್ಧಿ ಮತ್ತು ಉತ್ತೇಜನ ಮಾಡಲು ತೀರ್ಮಾನಿಸಲಾಗಿದೆ. ಬಂಡವಾಳ ಹೂಡಿಕೆಗೆ ವಾರ್ಷಿಕ ಕ್ರಿಯಾಯೋಜನೆ ಮಾಡಲು ಉದ್ದೇಶಿಸಲಾಗಿದೆ. ಉತ್ಪಾದನೆಗಾಗಿ ಜಮೀನು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಶೆಟ್ಟರ್ ಹೇಳಿದರು.
ಟೈಯರ್ 2, ಟೈಯರ್ 3 ನಗರಗಳಿಗೆ ಕೈಗಾರಿಕೆಗಳು ವಿಸ್ತರಣೆ ಮಾಡಲು ನೂತನ ಕೈಗಾರಿಕಾ ನೀತಿ ಸಹಕಾರಿಯಾಗಲಿದೆ. ರಿಯಾಯಿತಿ ನೀಡಲು ಕೈಗಾರಿಕಾ ಅಭಿವೃದ್ಧಿಗೆ ಮೂರು ಝೋನ್ಗಳಾಗಿ ಗುರುತಿಸುತ್ತಿದ್ದೇವೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಜಿಲ್ಲೆಗಳನ್ನು ವಿಂಗಡಿಸುತ್ತದೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಝೋನ್ 3 ಅಡಿ ಸೇರಿಸಲಾಗಿದೆ ಎಂದರು.
ಕೋವಿಡ್ ನಂತರ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಬೃಹತ್ ಬಂಡವಾಳವನ್ನು ಎಲ್ಲ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಈ ನೀತಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದು, ಮುಖ್ಯವಾಗಿ ಭೂಮಿ ಸಂಗ್ರಹಣೆ ಕಾರ್ಮಿಕ ಕಾನೂನುಗಳ ಸುಧಾರಣೆ ಹಾಗೂ ಆಕರ್ಷಕ ಮತ್ತು ಯೋಜನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಮೀನು ಪಡೆಯುವುದನ್ನು ಅನುಕೂಲಗೊಳಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಸೆಕ್ಷನ್ 109 ಕ್ಕೆ ತಿದ್ದುಪಡಿ ತರಲಾಗಿದೆ. ಖಾಸಗಿಯವರಿಂದ ಖಾಸಗಿ ಕೈಗಾರಿಕಾ ಪಾರ್ಕ್ ಗಳು, ಅಂದರೆ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಪಾರ್ಕ್, ಸೆಕ್ಟರ್ ಸ್ಪೆಸಿಫಿಕ್ ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್ ಹಾಗೂ ಫ್ಲಾಟೆಡ್ ಫಾಕ್ಟರಿಗಳ ಸ್ಥಾಪನೆಗೆ ಉತ್ತೇಜಿಸಲಾಗುವುದು ಎಂದು ಸಚಿವರು ವಿವರಿಸಿದರು.