ಬೆಂಗಳೂರು:ಎಸ್ಸಿಪಿಟಿಎಸ್ಪಿ ವಿಶೇಷ ಅನುದಾನವನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ದಲಿತರ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಪರಿಷತ್ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದಾರೆ. ಎಸ್ಸಿಪಿಟಿಎಸ್ಪಿ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಖರ್ಚಾಗದೇ ಉಳಿದ ಹಣವನ್ನು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು.
ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಿಎಂ, ಎಸ್ಸಿಪಿಟಿಎಸ್ಪಿ ಯೋಜನೆಗಳಡಿ ಅಂದಾಜು 1,157 ಕೋಟಿ ರೂ. ಅನುದಾನ ಉಳಿದಿದೆ. ಈ ಉಳಿಕೆ ಅನುದಾನವನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿರುವ ದಲಿತ ಕಾಲೋನಿಗಳಲ್ಲಿನ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಶೇ.50 ರಷ್ಟು ಅನುದಾನವನ್ನು ನೆರೆ ಪೀಡಿತ ಜಿಲ್ಲೆಗಳಲ್ಲಿ ಎಸ್ಸಿ, ಎಸ್ಟಿ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ರು.
ನೆರೆ ಪೀಡಿತ ಪ್ರದೇಶಗಳಲ್ಲಿ ಎಸ್ಸಿಪಿಟಿಎಸ್ಪಿ ಅನುದಾನ ಬಳಕೆಗೆ ದಲಿತ ಪರ ಸಂಘಟನೆಗಳಿಂದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ನಾವು ಇತರೆ ಕಾರ್ಯಕ್ರಮಗಳಿಗೆ ಈ ವಿಶೇಷ ಅನುದಾನ ಬಳಸುತ್ತಿಲ್ಲ. ಬದಲಾಗಿ ನೆರೆಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರಾಗಿರುವ ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ದಲಿತ ಕಾಲೋನಿಗಳ ಅಭಿವೃದ್ಧಿಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಬಳಸಿತ್ತು:ಹಿಂದಿನ ಸರ್ಕಾರದಲ್ಲಿ ಎಸ್ಸಿಪಿಟಿಎಸ್ಪಿ ಅನುದಾನವನ್ನು ರಸ್ತೆ, ಮೇಲ್ಸೇತುವೆ ಕಾಮಗಾರಿಗಳ ಉದ್ದೇಶಕ್ಕಾಗಿ ಬಳಸಲಾಗಿತ್ತು ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಇದೇ ವೇಳೆ ಆರೋಪಿಸಿದರು.
ಹಿಂದಿನ ಸರ್ಕಾರದಲ್ಲಿ ಎಸ್ಸಿಪಿಟಿಎಸ್ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಆ ಹಣವನ್ನು ನಾವು ಈಗ ವಾಪಸ್ ಪಡೆದುಕೊಂಡಿದ್ದೇವೆ. ಅದನ್ನು ಈಗ ನೆರೆ ಸಂತ್ರಸ್ತ ದಲಿತರಿಗೆ ಮನೆ ನಿರ್ಮಿಸಿಕೊಡಲು ಸದ್ಬಳಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.