ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ನಡೆಯಿತು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅತ್ಯಂತ ಪ್ರಮುಖವಾಗಿ ಕೋವಿಡ್ ನಿಯಂತ್ರಣ ರಾಜ್ಯದಲ್ಲಿ ಯಾವ ರೀತಿ ಇದೆ ಎನ್ನುವ ಬಗ್ಗೆ ಮಾಹಿತಿ ಕುರಿತು ಚರ್ಚೆ ನಡೆಯಿತು. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ ಶೇ.0.66 ಇದೆ. ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗುವುದು. ಈ ಶೇ.1 ಕ್ಕಿಂತ ಹೆಚ್ಚಾದರೆ ಶೇ. 50 ರಷ್ಟು ಹಾಗೂ ಶೇ.2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡುವ ಕುರಿತು ತೀರ್ಮಾನಿಸಲಾಗಿದೆ.
ಪಬ್ಗಳಿಗೂ ಇದೇ ಮಾನದಂಡ ಅನುಸರಿಸಲಾಗುವುದು. ಕನಿಷ್ಟ ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ. ಗರ್ಭಿಣಿಯರು ಮತ್ತು ಮಕ್ಕಳಿಗೆ ಪಬ್ಗಳಿಗೆ ಪ್ರವೇಶಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ನೈಟ್ ಕರ್ಫ್ಯೂವನ್ನ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನಿಗದಿ ಪಡಿಸಲಾಗುವುದು. 6 ರಿಂದ 12 ನೇ ತರಗತಿ ವರೆಗೆ ಶೇ.100 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಯಿತು. ವಾರದಲ್ಲಿ ಐದು ದಿನ ಶಾಲಾ-ಕಾಲೇಜು ನಡೆಸಲು ನಿರ್ಧರಿಸಲಾಯಿತು.