ಕರ್ನಾಟಕ

karnataka

ETV Bharat / state

ಡಿಜಿಟಲ್ ಪೇಮೆಂಟ್ ಆ್ಯಪ್ ಸಾಲಿಗೆ ವಿ-ಪೇ ಸೇರ್ಪಡೆ; ಹೊಸ ಆ್ಯಪ್ ಲಾಂಚ್ ಮಾಡಿದ ನಾಗಾಭರಣ - V PAY APP

ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಬೆಂಗಳೂರು ಮೂಲದ ಹೊಸ ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ನಿರ್ದೇಶಕ ಹಾಗೂ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆ್ಯಪ್ ​ಅನ್ನು ಬಿಡುಗಡೆಗೊಳಿಸಿದರು.

New Digital Payment App Launched
ಹೊಸ ಆ್ಯಪ್ ಲಾಂಚ್ ಮಾಡಿದ ಟಿ.ಎಸ್. ನಾಗಾಭರಣ

By

Published : Sep 16, 2020, 4:53 PM IST

Updated : Sep 16, 2020, 10:39 PM IST

ಬೆಂಗಳೂರು:ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಆ್ಯಪ್​​ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇವುಗಳ ಸಾಲಿಗೆ ಬೆಂಗಳೂರು ಮೂಲದ ವಿ-ಪೇ ಆ್ಯಪ್​ ಹೊಸ ಸೇರ್ಪಡೆಯಾಗಿದೆ. ಗೂಗಲ್ ಪೇ, ಫೋನ್ ಪೇ ರೀತಿ ಕಾರ್ಯ ನಿರ್ವಹಿಸುವ ಜೊತೆಗೆ ರೈತರಿಗೆ ರಿಯಾಯಿತಿ ಹಾಗೂ ಅಲ್ಪ ಬಡ್ಡಿದರದ ಸಾಲ ಸೌಲಭ್ಯವನ್ನು ಪ್ರಕಟಿಸಿದೆ. ವಿಶ್ವಾಸ್ ಟೆಕ್ ಪ್ರೈ.ಲಿ. ಡಿಜಿಟಲ್ ಪೇಮೆಂಟ್ ಪ್ಲಾಟ್​ಫಾರಂ ಅಡಿಯಲ್ಲಿ ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಹೊರತಂದಿದ್ದು, ನಗರದ ಖಾಸಗಿ ತಾರಾ ಹೋಟೆಲ್​​ನಲ್ಲಿ ನಡೆದ ಸಮಾರಂಭದಲ್ಲಿ ನಿರ್ದೇಶಕ ಹಾಗೂ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ನಾಗಾಭರಣ, ಆ್ಯಪ್​ನ ಮೂಲ ಭಾಷೆಯೂ ಕನ್ನಡದಲ್ಲಿ ಇರಬೇಕು, ರೈತರನ್ನ ಮುಟ್ಟಲು ಹೊರಟಿರುವವರು ರೈತರೊಂದಿಗೆ ಸಂವಹನ ನಡೆಸಬೇಕಾದರೆ ಕನ್ನಡ ಅಗತ್ಯ, ಕನ್ನಡದ ಮೂಲಕವೇ ಸಂವಹನ ನಡೆಸಬೇಕು. ಅದಕ್ಕಾಗಿ ಕನ್ನಡದಲ್ಲಿ ಆ್ಯಪ್ ಇರಲೇಬೇಕು, ಸ್ಪರ್ಧಾತ್ಮಕ ಪ್ರಪಂಚ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇಲ್ಲಿನ ಆ್ಯಪ್ ದೇಶಕ್ಕೆ‌ ಕೊಡಗೆಯಾಗಬೇಕು. ಹಾಗಾಗಬೇಕಾದರೆ ಈ ಆ್ಯಪ್ ಅನ್ನು ಚಿಮ್ಮು ಹಲಗೆಯಾಗಿ ಬಳಸಿಕೊಳ್ಳಬೇಕು, ಇಲ್ಲಿಯೇ ಸೀಮಿತ ಆಗಬಾರದು, ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ವಿ-ಪೇ ಆ್ಯಪ್ ವಿವರ : ಮುಖ್ಯವಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ವಿ-ಪೇ- ಆ್ಯಪ್ ಮುಖಾಂತರ ಹಣ ವರ್ಗಾವಣೆ, ಎಲ್ಲಾ ರೀತಿಯ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್, ವಿದ್ಯುತ್ ಬಿಲ್‍ಗಳನ್ನು ಪಾವತಿ ಮಾಡಬಹುದಾಗಿದೆ. ಇನ್ನು ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್​ಅನ್ನು ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹೊಸ ಆ್ಯಪ್ ಲಾಂಚ್ ಮಾಡಿದ ಟಿ.ಎಸ್. ನಾಗಾಭರಣ

ಹಾಗೆಯೇ ರೈತ ವ್ಯವಸಾಯಕ್ಕೆ ಬಳಸುವ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೂ ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಉಪಯೋಗವಾಗಲಿದೆ. ವಿ -ಪೇ ಆ್ಯಪ್ ಮತ್ತು ವಿ-ಕಾರ್ಡ್ ಮೂಲಕ ಖರೀದಿ ಮಾಡಿದಾಗ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ತಾಲೂಕಿನಲ್ಲಿ ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಫ್ರಾಂಚೈಸಿಗಳನ್ನು ಹೊಂದಿದೆ. ಈ ಫ್ರಾಂಚೈಸಿಗಳ ಮೂಲಕ ಗ್ರಾಹಕರು ವಿ-ಪೇ ಆ್ಯಪ್ ಮತ್ತು ವಿ-ಕಾರ್ಡ್ ಬಳಕೆ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

Last Updated : Sep 16, 2020, 10:39 PM IST

ABOUT THE AUTHOR

...view details