ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 50 ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣಕ್ಕೆ 675 ಕೋಟಿ ರೂ ಅನುದಾನ ಒದಗಿಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮನವಿ ಸಲ್ಲಿಸಿದರು.
ಸಂಸತ್ ಭವನದಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿದ ಅವರು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಬೇಡಿಕೆ ಇದ್ದು 19 ಶಾಲೆಗಳಿಗೆ 475 ಕೋಟಿ ರೂ ನೆರವು ಒದಗಿಸುವಂತೆ ಕೋರಿದರು.
ಅದೇ ರೀತಿ 50 ಮೆಟ್ರಿಕ್ ನಂತರದ ಹಾಸ್ಟೇಲ್ಗಳ ನಿರ್ಮಾಣಕ್ಕೆ 200 ಕೋಟಿ ರೂ ಅನುದಾನ ಒದಗಿಸಬೇಕು. 2.93 ಲಕ್ಷ ವಿದ್ಯಾರ್ಥಿಗಳಿಗೆ 2022-23 ನೇ ಸಾಲಿನ ಸಿಎಂ ವಿದ್ಯಾರ್ಥಿ ವೇತನ ಮೊತ್ತ ಬಿಡುಗಡೆ ಬಾಕಿ ಇದ್ದು ತಕ್ಷಣ ಬಿಡುಗಡೆ ಮಾಡಬೇಕು. 2023-24 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಇಲಾಖೆಯಿಂದ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಕುರಿತಂತೆ ಸುದೀರ್ಘವಾಗಿ ಮಾತುಕತೆ ನಡೆಸಿದರು.
ಕೇಂದ್ರ ಪುರಸ್ಕೃತ ಯೋಜನೆ ಸಖಿ ಒನ್ ಸ್ಟಾಪ್ ಸೆಂಟರ್, ಸಖಿ ನಿವಾಸ್, ಶಕ್ತಿ ಸದನ್, ಉಜ್ವಲ್ ಹಾಗೂ ಸ್ವಾಧಾರ ಗೃಹ ಯೋಜನೆಗಳ ಅನುದಾನ ಬಿಡುಗಡೆಗೊಳಿಸುವಂತೆ ವಿನಂತಿಸಿದರು. ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳಿಗೆ ನೀಡಬೇಕಿರುವ ಅಕ್ಕಿ ಮತ್ತು ಗೋದಿ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದೆ ಬಾಕಿ ಉಳಿದಿರುವ ಕುರಿತು ಸಹ ಕೇಂದ್ರ ಸಚಿವರ ಗಮನ ಸೆಳೆದ ಲಕ್ಷ್ಮಿ ಹೆಬ್ಬಾಳ್ಕರ್, ಕೂಡಲೇ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವಂತೆ ಕೋರಿದರು.
ಜೊತೆಗೆ, ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 51 ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರು ಮಾಡುವಂತೆ ಮತ್ತು ಸಿಬ್ಬಂದಿ ನೀಡುವಂತೆ ಹಾಗೂ ಸಕ್ಷಮ್ ಯೋಜನೆಯಡಿಯ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ ಕ್ಲಾಸ್ ರೂಂ ಆಗಿ ಪರಿವರ್ತಿಸಲು ಸಹ ಲಕ್ಷ್ಮಿ ಹೆಬ್ಬಾಳಕರ್ ಸ್ಮೃತಿ ಇರಾನಿ ಬಳಿ ಮನವಿ ಮಾಡಿದರು.
ಇದನ್ನೂಓದಿ:ಛತ್ತೀಸ್ಗಢ ವಿಧಾನಸಭೆ ನೂತನ ಸ್ಪೀಕರ್ ಆಗಿ ಮಾಜಿ ಸಿಎಂ ರಮಣ್ ಸಿಂಗ್ ಆಯ್ಕೆ