ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇತ್ತ ಅನಾರೋಗ್ಯ ಮತ್ತು ತುರ್ತು ಆರೈಕೆ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬಹುದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ದಂತ ಸಮಸ್ಯೆ ಹೊಂದಿರುವ ರೋಗಿಗಳನ್ನು ಒಳಗೊಂಡಂತೆ ಹೊರರೋಗಿಗಳು, ಫಾಲೋಅಪ್ ಕೇಸ್, ಇತರೆ ಅನಾರೋಗ್ಯದ ಎಲ್ಲಾ ರೋಗಿಗಳು ಮುಂದಿನ ಎರಡು ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಆಸ್ಪತ್ರೆಗೆ ಭೇಟಿ ನೀಡುವಂತಿಲ್ಲ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ಹಾಗೂ ಜನಸಂದಣಿ ತಡೆಯಲು ಆಸ್ಪತ್ರೆಗಳಿಗೆ ಭೇಟಿ ನೀಡಬಾರದೆಂದು ಎಚ್ಚರಿಕೆ ನೀಡಿದೆ.
ಖಾಸಗಿ ಆಸ್ಪತ್ರೆಗಳು ಜನಸಂದಣಿಯನ್ನು ತಡೆಗಟ್ಟಲು ಮತ್ತು COVID-19 ಹರಡುವುದನ್ನು ನಿಯಂತ್ರಿಸಲು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರದ ಈ ಆದೇಶವೂ ಸದ್ಯ ಹೊರರೋಗಿಗಳಿಗೆ(OPD) ಶಾಕ್ ಕೊಟ್ಟಿದೆ.