ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದು ಎರಡನೇ ಹಂತದ ಚುನಾವಣೆಗೆ ಸಿದ್ಧವಾಗುತ್ತಿರುವಾಗಲೇ ರಾಜ್ಯದಲ್ಲಿಮತ್ತೆ ‘ಹೊಸ ಮುಖ್ಯಮಂತ್ರಿ’ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಹಾಗೂ ಗದಗದಲ್ಲಿ ಶನಿವಾರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ‘ನಾನು ಮತ್ತೆ ಮುಖ್ಯಮಂತ್ರಿಯಾದರೆ ಹತ್ತು ಕೆ.ಜಿ. ಅಕ್ಕಿ ಉಚಿತವಾಗಿ ನೀಡುತ್ತೇನೆ’ ಎಂದು ಘೋಷಣೆ ಮಾಡಿರುವುದು ಈಗ ಸಂಚಲನ ಮೂಡಿಸಿದೆ.
ಇನ್ನು ಸಚಿವ ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ನಿನ್ನೆ ಪ್ರಚಾರ ಮಾಡುತ್ತಿದ್ದ ವೇಳೆ ಸಾರ್ವಜನಿಕ ಜೀವನದಲ್ಲಿ ಇರುವ ನಮಗೆ ಬಹಳ ಜನರ ಸೀಕ್ರೆಟ್ ಗೊತ್ತಿರುತ್ತದೆ. ನಾನು ಮುಖ್ಯಮಂತ್ರಿಯಾದಾಗ, ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಪ್ರಚಾರ ಮಾಡುತ್ತಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇದಕ್ಕೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎಂದಿರುವುದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳಿಂದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಾಗುತ್ತದೆ. ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನ ಕೆಲ ನಾಯಕರು ಕೆಲ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮಪಾಲನೆ ಮಾಡದಿರುವುದು ಸಾಬೀತಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಬಿರುಕಿರುವುದು ಈ ಹೇಳಿಕೆಗಳಿಂದ ತಿಳಿಯುತ್ತದೆ. ಮುಂದಿನ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದರೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಮುಖಂಡರು ಕುಟುಕಿದ್ದಾರೆ.
ಇದು ಸಿದ್ದರಾಮಯ್ಯನವರ ನಿರ್ಧಾರವೋ?. ಪಕ್ಷದ ತೀರ್ಮಾನವೋ?. ಅವರ ಈ ಹೇಳಿಕೆಗೆ ಉಳಿದ ಕಾಂಗ್ರೆಸ್ ಮುಖಂಡರ ಒಪ್ಪಿಗೆ ಇದೆಯೇ? ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್ ಮಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಬಗ್ಗೆ ಪ್ರಸ್ತಾಪಿಸಿರುವುದು ಮೈತ್ರಿ ಸರ್ಕಾರದ ಪತನದ ಮುನ್ಸೂಚನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಹುನ್ನಾರ ನಡೆಸಿರುವುದು ಸ್ಪಷ್ಟ. ಅವರ ಈ ಹೇಳಿಕೆ ಮೈತ್ರಿ ಸರ್ಕಾರದ ಪತನದ ಮುನ್ಸೂಚನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹಾಸನ, ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಬರಲಿರುವ ಫಲಿತಾಂಶ ಊಹಿಸಿ ಸಿದ್ದರಾಮಯ್ಯನವರು ಈ ರೀತಿ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.