ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಯುವ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ರಾಜ್ಯಮಟ್ಟದಲ್ಲಿ ರೋಜ್ಗಾರ್ ದೋ ಹೋರಾಟ ಆರಂಭಿಸಿದೆ.
ಇದರ ಭಾಗವಾಗಿ ಇಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ನೇತೃತ್ವದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೌರ್ಯ ವೃತ್ತದಿಂದ ಕಾಂಗ್ರೆಸ್ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಕೇಂದ್ರದ ವಿರುದ್ಧ ರೋಜ್ಗಾರ್ ದೋ ಹೋರಾಟಕ್ಕೆ ದೇಶಾದ್ಯಂತ ಇಂದು ಚಾಲನೆ ಸಿಗಲಿದೆ.
ರೋಜ್ಗಾರ್ ದೋ ಹೋರಾಟಕ್ಕೆ ಚಾಲನೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಪ್ರತಿಭಟನಾ ಮೆರವಣಿಗೆ ಮೂಲಕ ಚಾಲನೆ ನೀಡಲಿದ್ದು, 'ಪ್ರಧಾನಿಯವರೇ ಕೊಟ್ಟ ಮಾತು ಉಳಿಸಿಕೊಳ್ಳಿ. ಯುವಜನರಿಗೆ ಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿ. ಮಾತು ಕೊಟ್ಟು ಮತ ಪಡೆದವರು ನೀವು. ಉದ್ಯೋಗವಿಲ್ಲದೆ ಹತಾಶರಾದ ಯುವಜನರು ನಾವು. ಯುವಕರಿಗೆ ಉದ್ಯೋಗ ಕೊಡಿ' ಎಂದು ಒತ್ತಡ ಹೇರಲಿದ್ದಾರೆ.
ಮಿಸ್ ಕಾಲ್ ನೀಡುವ ಮೂಲಕ ಅಭಿಯಾನದ ಪರ ದನಿಯೆತ್ತಿ ಎಂದು ಕರೆ ಕೊಟ್ಟಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಕರ್ನಾಟಕದ ಮೂಲಕವೇ ಈ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.