ಬೆಂಗಳೂರು:ಪೊಲೀಸ್ ಕಮೀಷನರ್ ಕಚೇರಿಯ ಅನತಿ ದೂರದಲ್ಲಿರುವ ಬಸ್ ತಂಗುದಾಣವೇ ಕಳ್ಳತನವಾಗಿದೆ, ದಯವಿಟ್ಟು ಪತ್ತೆ ಮಾಡಿ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರೂಪದಲ್ಲಿ ಅಪರೂಪವೆಂಬಂತೆ ಬಸ್ ಶೆಲ್ಟರ್ನ್ನೇ ಖದೀಮರು ಕಳ್ಳತನ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಂಗುದಾಣ ನಿರ್ಮಾಣ ಮಾಡಿದ್ದ ಖಾಸಗಿ ಸಂಸ್ಥೆಯ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಎಂಬುವರು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಬಿಎಂಪಿ ಅನುಮತಿ ಪಡೆದು ತಮ್ಮ ಕಂಪನಿಯ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗ 10 ಲಕ್ಷ ರೂ. ವೆಚ್ಚದಲ್ಲಿ ಆಗಸ್ಟ್ 21 ರಂದು ಸ್ಟೇನ್ ಲೇಸ್ ಸ್ಟೀಲ್ ಬಳಸಿ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆ. 28ರಂದು ಎಲ್ಲ ಬಸ್ ನಿಲ್ದಾಣಗಳನ್ನು ಪರೀಕ್ಷಣೆ ಮಾಡುವಂತೆ ಇಲ್ಲಿಗೂ ಬಂದು ನೋಡಿದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿತ್ತು. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದರಿಂದ ಅಚ್ಚರಿಗೊಳಗಾದ ಖಾಸಗಿ ಕಂಪನಿಯ ಉಪಾಧಕ್ಷ ರವಿ ರೆಡ್ಡಿ ಸೆ. 30ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.