ಬೆಂಗಳೂರು: ಕಳೆದ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಗುವನ್ನು ಪತ್ತೆ ಮಾಡುವಲ್ಲಿ ವಿಫಲರಾದ ಪೊಲೀಸರಿಗೆ ಹೈಕೋರ್ಟ್ ಚಾಟಿ ಬೀಸಿದೆ.
ಹೈಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ 4 ಜನ ಇನ್ಸ್ಪೆಕ್ಟರ್ ಒಳಗೊಂಡ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಚಾಮರಾಜಪೇಟೆ ಶಿರಸಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಹುಸ್ಮಾ ಭಾನು ಎಂಬುವರಿಗೆ ಕಳೆದ ವರ್ಷ ಮೇ. 29ರಂದು ಗಂಡು ಮಗು ಜನನವಾಗಿತ್ತು. ಹುಟ್ಟಿದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ನಾಪತ್ತೆಯಾಗಿತ್ತು. ಆಸ್ಪತ್ರೆಯ ಅಂಗಳದಲ್ಲಿ ಶೋಧ ಕಾರ್ಯ ನಡೆಸಿದರೂ ಶಿಶು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಹುಸ್ಮಾ ಭಾನು- ನವೀದ್ ಪಾಷಾ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.