ಬೆಂಗಳೂರು: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಹನ ತೆಗೆದುಕೊಂಡು ಹೋದರೆ, ಆ ರಾಜ್ಯದಲ್ಲಿ ಮರು ನೋಂದಣಿ ಮಾಡಬೇಕಿತ್ತು. ಇದು ರಾಜ್ಯದಿಂದ ರಾಜ್ಯಕ್ಕೆ ಓಡಾಡೋರಿಗೆ ದೊಡ್ಡ ತಲೆ ನೋವಾಗಿತ್ತು. ಯಾವುದೇ ಒಂದು ವಾಹನವೂ ಕರ್ನಾಟಕದಲ್ಲಿ ನೋಂದಣಿಯಾಗಿ ಪಕ್ಕದ ರಾಜ್ಯಕ್ಕೆ ತೆಗೆದುಕೊಂಡು ಹೋಗಿ 12 ತಿಂಗಳು ಕಾಲ ಅಲ್ಲೇ ಇಟ್ಟಕೊಂಡರೆ, ಆ ರಾಜ್ಯದಲ್ಲಿ ಮರು ನೋಂದಣಿ ಮಾಡಿಸಬೇಕಿತ್ತು. ಇದನ್ನ ತಪ್ಪಿಸಲು ಇದೀಗ ಕೇಂದ್ರ ಸರ್ಕಾರ ಬಿಹೆಚ್ ಸಿರೀಸ್ ಆರಂಭಿಸಿದೆ.
ಬೇರೆ ದೇಶದಲ್ಲಿ ಇರುವಂತೆ ವಾಹನ ನೋಂದಣಿಗೆ ಒಂದೇ ನಂಬರ್ ನಮ್ಮ ದೇಶದಲ್ಲಿ ಇಲ್ಲ. ಬದಲಾಗಿ, ಆಯಾ ರಾಜ್ಯಗಳು ಕೆಎ ಕರ್ನಾಟಕ, ಎಂಹೆಚ್ ಮಹಾರಾಷ್ಟ್ರ ಹೀಗೆ ಎಪಿ, ಡಿಎಲ್, ಟಿಎನ್ ಅಂತ ಒಂದೊಂದು ರಾಜ್ಯದ ವಾಹನಕ್ಕೆ ಒಂದೊಂದು ನೋಂದಣಿ ಸಂಖ್ಯೆ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೆಪ್ಟೆಂಬರ್ 15 ರಿಂದ ಬಿಹೆಚ್ ರಿಜಿಸ್ಟ್ರೇಷನ್ ನಂಬರ್ ಚಾಲ್ತಿಗೆ ತರ್ತಿದೆ.
ಖಾಸಗಿ ವಾಹನ ಹೊಂದಿದ್ದು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರು ನೋಂದಣಿ ಬಹಳ ಕಷ್ಟವಾಗ್ತಿತ್ತು. ಹೊರ ರಾಜ್ಯದ ನೋಂದಣಿಯಾಗಿರುವ ವಾಹನ ಬಂದರೆ ಸಾಕು ಪೊಲೀಸರು ಕೈ ಅಡ್ಡಹಾಕಿ ದಾಖಲೆಗಳನ್ನು ಕೇಳುತ್ತಿದ್ದರು. ಪ್ರಸುತ್ತ ಇರುವ ನಿಯಮಗಳು ಪ್ರಕಾರ, ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನ ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ 12 ತಿಂಗಳೊಳಗೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕು. ಅಲ್ಲದೇ, ಸ್ಥಳಾಂತರವಾದಾಗ ಹೊಸದಾಗಿ ರಸ್ತೆ ತೆರಿಗೆ, ಮರು ನೋಂದಣಿ ಆಗಬೇಕಿತ್ತು. ನೋಂದಣಿಯಾಗಿದ್ದ ರಾಜ್ಯದಿಂದ ಎನ್ಒಸಿ ಪಡೆದಿರಬೇಕಿತ್ತು. ಇದೆಲ್ಲ ವಾಹನ ಮಾಲೀಕರಿಗೆ ತಲೆಬಿಸಿಯಾಗಿತ್ತು. ಇದೆಲ್ಲವನ್ನ ಬಿಹೆಚ್ ರಿಜಿಸ್ಟ್ರೇಷನ್ ತಪ್ಪಿಸಲಿದೆ.
ಬಿಹೆಚ್ ಅಂದರೆ ಭಾರತ್ ಸಿರೀಸ್:
ಈ ನೊಂದಣಿ ಸಂಖ್ಯೆ ಹೊಂದಿರುವ ವಾಹನಗಳು ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.ಇನ್ನು ಬಿಹಚ್ ಸಿರೀಸ್ ಅನ್ನ ಎಲ್ಲರಿಗೂ ಕೊಡಲ್ಲ, ರಾಜ್ಯ- ಕೇಂದ್ರದ ಸರ್ಕಾರಿ ನೌಕರರಿಗೆ, ಸೇನಾಪಡೆ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಿಬ್ಬಂದಿ, ಹಾಗೂ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕರರಿಗೆ ಮಾತ್ರ ಈ ಸಿರೀಸ್ ನಡಿ ವಾಹನ ನೋಂದಣಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತೆ. ಇದು ಐಚ್ಛಿಕವಾಗಿದ್ದು ಇಷ್ಟವಿದ್ದರಷ್ಟೇ ಈ ಸಿರೀಸ್ ತೆಗೆದುಕೊಳ್ಳಬಹುದು ಅಂತ ರಾಜ್ಯ ಸಾರಿಗೆ ಆಯುಕ್ತ ಶಿವಕುಮಾರ್ ತಿಳಿಸಿದರು.