ಬೆಂಗಳೂರು: ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗ ನೇಮಕಾತಿಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದಂತೆ ನಿಗಾ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಮುಕ್ತ ವಿ.ವಿ.ಯಲ್ಲಿ ಕಲಿತವರಿಗೆ ನೇಮಕಾತಿಯಲ್ಲಿ ತಾರತಮ್ಯ ಆಗದಂತೆ ನಿಗಾ: ಸಚಿವ ಅಶ್ವತ್ಥ ನಾರಾಯಣ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಕೋವಿಡ್ ಹಾಗೂ ಎನ್ಇಪಿ 2020 ಹಿನ್ನೆಲೆಯಲ್ಲಿ ಆನ್ ಲೈನ್ ಡಿಜಿಟಲ್ ಕಲಿಕೆ (ಒ.ಡಿ.ಎಲ್.) ಮತ್ತು ಆನ್ ಲೈನ್ ಕಲಿಕೆ (ಆನ್ ಲೈನ್ ಲರ್ನಿಂಗ್) ಉತ್ತೇಜಿಸಲು ನಿಯಮಾವಳಿಗಳಲ್ಲಿ ಗುಣಾತ್ಮಕ ಸುಧಾರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್) ಇತ್ತೀಚೆಗೆ ನೇಮಕಾತಿಯೊಂದರ ವೇಳೆ ಮುಕ್ತ ವಿ.ವಿ. ಅಭ್ಯರ್ಥಿಗಳಿಗೆ ಅವಕಾಶವಿಲ್ಲ ಎಂಬ ನಿಬಂಧನೆ ವಿಧಿಸಿದ್ದನ್ನು ಕುಲಪತಿ ಪ್ರೊ ವಿದ್ಯಾಶಂಕರ್ ಸಚಿವರ ಗಮನಕ್ಕೆ ತಂದಾಗ ಈ ಭರವಸೆ ನೀಡಿದರು.
ಗೊಂದಲ ನಿವಾರಣೆಗೆ ಯತ್ನ: ಯು.ಜಿ.ಸಿ. ಮಾನ್ಯತೆ ಇರುವ ಮುಕ್ತ ವಿಶ್ವವಿದ್ಯಾಲಯಗಳ ಪದವಿಗಳು ಕೂಡ ಇತರ ವಿ.ವಿ.ಗಳ ಪದವಿಗಳ ಹಾಗೆ ಎಲ್ಲ ರೀತಿಯ ಉದ್ಯೋಗಕ್ಕೂ ಸಲ್ಲುವ ಹಾಗೆ ಇರಬೇಕು. ಈ ಸಂಬಂಧ ಮುಖ್ಯಮಂತ್ರಿಯವರ ಗಮನಕ್ಕೂ ತಂದು ಗೊಂದಲ ನಿವಾರಿಸಲಾಗುವುದು ಎಂದು ಹೇಳಿದರು.
ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಆನ್ ಲೈನ್ ಶಿಕ್ಷಣ: ಮುಕ್ತ ವಿಶ್ವವಿದ್ಯಾಲಯಗಳಿಗೆ ಆನ್ ಲೈನ್ ಶಿಕ್ಷಣ ನೀಡಲು ಅನುಮತಿ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ತನ್ನ ನಿಯಾಮವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಮುಕ್ತ ವಿ.ವಿ.ಗಳು ಕೂಡ ಹೆಚ್ಚೆಚ್ಚು ಜನರಿಗೆ ಶಿಕ್ಷಣ ನೀಡಲು ಸಾಧ್ಯವಾಗುವಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಹೊಸ ಕೋರ್ಸ್ ಗಳನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ದಾಖಲಾತಿ ಅನುಪಾತದ (ಜಿಇಆರ್) ಗುರಿ ಸಾಧಿಸಲು ಆನ್ ಲೈನ್ ಶಿಕ್ಷಣಕ್ಕೆ ಪ್ರಾಮುಖ್ಯತೆ: ಶಿಕ್ಷಣ ಸಂಸ್ಥೆಗಳು ಜನಸಮುದಾಯದಲ್ಲಿ ಅರಿವು ಮೂಡಿಸುವಂತೆ ಕಾರ್ಯಾಚರಣೆ ಮಾಡಬೇಕು. ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗಿಸಲು ಆನ್ ಲೈನ್ ಶಿಕ್ಷಣವನ್ನು ಸದೃಢಗೊಳಿಸುವುದು ಅತ್ಯಗತ್ಯ. ಉನ್ನತ ಶಿಕ್ಷಣದಲ್ಲಿ ಶೇ 50ರ ಒಟ್ಟಾರೆ ದಾಖಲಾತಿ ಅನುಪಾತದ (ಜಿಇಆರ್) ಗುರಿ ಸಾಧಿಸಲು ಆನ್ ಲೈನ್ ಶಿಕ್ಷಣಕ್ಕೆ ಪ್ರಾಮುಖ್ಯ ಅತ್ಯಗತ್ಯ ಎಂದರು.
ಪಠ್ಯಕ್ರಮವನ್ನು ಪರಿಷ್ಕೃತಗೊಳಿಸುವುದು ಮುಕ್ತ ವಿ.ವಿ.ಗಳಿಗೆ ಸವಾಲು: ಕಾಲಕಾಲಕ್ಕೆ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸುವುದು ಮುಕ್ತ ವಿ.ವಿ.ಗಳಿಗೆ ಸವಾಲಿನ ಕೆಲಸವಾಗಿದ್ದು, ಮೂಲಸೌಲಭ್ಯಗಳಿಗಾಗಿ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಆದ್ದರಿಂದ ಯು.ಜಿ.ಸಿ.ಯು ಮುಕ್ತ ವಿ.ವಿ.ಗಳಿಗೆ ಅಭಿವೃದ್ಧಿ ಅನುದಾನವನ್ನು ಪ್ರತಿ ವರ್ಷಕ್ಕೊಮ್ಮೆ ಬಿಡುಗಡೆ ಮಾಡಬೇಕು. ಕಳೆದ 2-3 ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಮುಕ್ತ ವಿ.ವಿ.ಗಳಿಗೆ ಕೆಲವು ನ್ಯಾಕ್ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಇದರ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು.
ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ಅವಿಚಲ್ ಕಪೂರ್ ಮಾತನಾಡಿ, ಮುಂಚೆ ಪಠ್ಯಕ್ರಮದ ಶೇ 20ರಷ್ಟನ್ನು ಆನ್ಲೈನ್ ಮೂಲಕ ಕಲಿಸಲು ಅನುಮತಿ ಇತ್ತು. ಈಗ ಇದನ್ನು ಶೇ 40ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಹೈದರಾಬಾದ್ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿ.ವಿ.ಯ ಕುಲಪತಿ ಪ್ರೊ.ಕೆ. ಸೀತಾರಾಮ ರಾವ್, ಅಹಮದಾಬಾದ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿ.ವಿ.ಯ ಪ್ರೊ. ಅಮಿ.ವಿ. ಉಪಾಧ್ಯಾಯ, ಕೃಷ್ಣಕಾಂತ ಮುಕ್ತ ವಿ.ವಿ.ಯ ಪ್ರೊ. ನೃಪೇಂದ್ರ ನಾರಾಯಣ ಶರ್ಮ, ಒಡಿಶಾ ಮುಕ್ತ ವಿ.ವಿ.ಯ. ಪ್ರೊ.ಅರ್ಕಕುಮಾರ್ ದಾಸ್ ಮೊಹಾಪಾತ್ರ, ತಮಿಳುನಾಡು ಮುಕ್ತ ವಿ.ವಿ.ಯ ಪ್ರೊ.ಕೆ. ಪಾರ್ಥಸಾರಥಿ, ಪಂಜಾಬ್ ಮುಕ್ತ ವಿ.ವಿ.ಯ ಪ್ರೊ. ಕರಣ್ ಜೀತ್ ಸಿಂಗ್ ಪಾಲ್ಗೊಂಡಿದ್ದರು.
ಇದನ್ನೂ ಓದಿ:30 ತಿಂಗಳು ಕಳೆದರೂ ಕೈಸೇರದ ನೆರೆ ಪರಿಹಾರ: ಬೆಳಗಾವಿ ಡಿಸಿ ಕಚೇರಿ ಎದುರು ಸಂತ್ರಸ್ತರ ಪ್ರತಿಭಟನೆ