ಕರ್ನಾಟಕ

karnataka

By

Published : Jan 22, 2023, 10:02 PM IST

ETV Bharat / state

ಪ್ರತಿಭಟನೆಗೆ ನೇತಾಜಿ ಜನ್ಮದಿನವನ್ನೇ ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದೆ: ರವಿಕುಮಾರ್

ಕಾಂಗ್ರೆಸ್‌ ಪಕ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನದಂದೇ ಪ್ರತಿಭಟನೆ ಹಮ್ಮಿಕೊಂಡು ಅವಮಾನಿಸಲು ಮುಂದಾಗಿದೆ - ಕೂಡಲೇ ಕಾಂಗ್ರೆಸ್‌ ಈ ಪ್ರತಿಭಟನೆ ಹಿಂಪಡೆಯಬೇಕು - ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹ

BJP State General Secretary Ravikumar
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು: ಯಾವುದೇ ರಾಷ್ಟ್ರ ನಾಯಕರ ಜನ್ಮ ದಿನದಂದು, ರಾಷ್ಟ್ರೀಯ ಹಬ್ಬದಂದು ಕಪ್ಪು ಪಟ್ಟಿ ಪ್ರದರ್ಶಿಸುವ, ಪ್ರತಿಭಟನೆ ಮಾಡುವ ದಾರ್ಷ್ಟ್ಯವನ್ನು ಜವಾಬ್ದಾರಿಯುತ ನಾಗರಿಕನಾಗಲಿ, ರಾಜಕೀಯ ಪಕ್ಷವಾಗಲಿ ಎಂದಿಗೂ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಂದು ಅಂತಹ ಕೆಲಸಕ್ಕೆ ಮುಂದಾಗಿದೆ, ಕಾಂಗ್ರೆಸ್‌ನ ಈ ನಡೆ ತೀವ್ರ ಖಂಡನೀಯ. ಈ ನಡೆಯನ್ನು ಭಾರತದ ಪ್ರತಿಯೊಬ್ಬ ನಾಗರಿಕನೂ ಖಂಡಿಸುತ್ತಾನೆ. ಕೂಡಲೇ ಕಾಂಗ್ರೆಸ್‌ ಪಕ್ಷ ಈ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.

ಸುಭಾಷ್‌ಚಂದ್ರ ಬೋಸ್‌ಗೆ ಅವರಿಗೆ ಅವಮಾನ ಮಾಡಲಾಗುತ್ತಿದೆ:ಕಾಂಗ್ರೆಸ್‌ನಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್‌ಗೆ ಅವರಿಗೆ ಅವಮಾನ ಮಾಡಲಾಗುತ್ತಿದೆ. ಚಾರಿತ್ರಿಕವಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರನ್ನು ಅವಮಾನಿಸುತ್ತಲೇ ಬರುತ್ತಿರುವ ಕಾಂಗ್ರೆಸ್‌ ಪಕ್ಷ ಇದೀಗ ಅವರ ಜನ್ಮ ದಿನದಂದೇ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮತ್ತಷ್ಟು ಅವಮಾನಿಸಲು ಮುಂದಾಗಿದೆ. ಭಾನುವಾರ ಮಾಧ್ಯಮಗೋಷ್ಟಿ ನಡೆಸಿದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ಜ.23, ಸೋಮವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಗರದ 300ಕ್ಕೂ ಹೆಚ್ಚು ಕಡೆಗಳಲ್ಲಿ ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ ಎಂದು ಮೌನ ಪ್ರತಿಭಟನೆ ಮಾಡಲಾಗುವುದು' ಎಂದು ಹೇಳಿದ್ದರು.

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಭಾರತದ ಮೊದಲ ಪ್ರಧಾನಿ:ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರು ನಿಜವಾಗಿ, ಭಾರತದ ಮೊದಲ ಪ್ರಧಾನಿ. ಭಾರತದ ಮೊಟ್ಟ ಮೊದಲ ಸ್ವತಂತ್ರ ಸರ್ಕಾರ ಆಜಾದ್‌ ಹಿಂದ್‌ ಸರ್ಕಾರ ವನ್ನು ಘೋಷಿಸಿದವರು ಸುಭಾಷ್‌ಚಂದ್ರ ಬೋಸ್‌. ಹಗಲು ರಾತ್ರಿ ಶ್ರಮವಹಿಸಿ ಬ್ರಿಟಿಷರ ನಿದ್ದೆಗೆಡಿಸಿದವರು ಅವರು. ಬ್ರಿಟಿಷ್‌ ಅಧಿಕಾರಿ ಕ್ಲೆಮೆಂಟ್‌ ಆಟ್ಲಿಯೇ ಹೇಳಿರುವಂತೆ, ಬ್ರಿಟಿಷರು ಭಾರತದಿಂದ ತೊಲಗಲು ಹೆಚ್ಚು ಕಾರಣವಾಗಿದ್ದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಚಳವಳಿಯಾಗಿದೆ. ಆದರೆ ಕಾಂಗ್ರೆಸ್‌ ಪಕ್ಷ ಎಂದಿಗೂ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸಿಗಬೇಕಾದ ಗೌರವವನ್ನು ನೀಡಲಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ನೇತಾಜಿ ಅವರನ್ನು ಇತಿಹಾಸದ ಪುಟಗಳಲ್ಲಿ ಹುದುಗಿಸುವ ಕೆಲಸ ಮಾಡುತ್ತಲೇ ಬಂದಿದೆ. ನೇತಾಜಿ ಅವರ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸದೆ ಜನರನ್ನು ದಾರಿ ತಪ್ಪಿಸಲಾಯಿತು. ಅವರ ಕುರಿತಾದ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ದಶಕಗಳಿಂದ ಕೂಗಿದ್ದರೂ ಅದ್ಯಾವುದನ್ನೂ ಕಾಂಗ್ರೆಸ್ ಕೇಳಿಸಿಕೊಳ್ಳಲಿಲ್ಲ. ನಮ್ಮ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲಷ್ಟೇ ನೇತಾಜಿ ಅವರ ದಾಖಲೆಗಳನ್ನು ಬಹಿರಂಗ ಮಾಡಲಾಯಿತು ಎಂದು ತಿಳಿಸಿದರು.

ನವದೆಹಲಿಯ ಇಂಡಿಯಾ ಗೇಟ್‌ ಬಳಿ ನೇತಾಜಿ ಅವರ ಪ್ರತಿಮೆ ಸ್ಥಾಪನೆ ಮಾಡಲು ಮೋದಿಯವರೇ ಬರಬೇಕಾಯಿತು. ಆದ್ರೆ ಕಾಂಗ್ರೆಸ್‌, ತನ್ನ ಪ್ರತಿಭಟನೆಗೆ ನೇತಾಜಿ ಅವರ ಜನ್ಮದಿನವನ್ನೇ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದೆ. ಯಾವುದೇ ರಾಷ್ಟ್ರ ನಾಯಕರ ಜನ್ಮ ದಿನದಂದು, ರಾಷ್ಟ್ರೀಯ ಹಬ್ಬದಂದು ಕಪ್ಪು ಪಟ್ಟಿ ಪ್ರದರ್ಶಿಸುವ, ಪ್ರತಿಭಟನೆ ಮಾಡುವ ದಾರ್ಷ್ಟ್ಯವನ್ನು ಜವಾಬ್ದಾರಿಯುತ ನಾಗರಿಕನಾಗಲಿ, ರಾಜಕೀಯ ಪಕ್ಷವಾಗಲಿ ಎಂದಿಗೂ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಡೆಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಈ ನಡೆ ತೀವ್ರ ಖಂಡನೀಯ:ಇದೇ ಕಾಂಗ್ರೆಸ್‌ನವರು ಜವಾಹರಲಾಲ್‌ ನೆಹರೂ ಅವರ ಜನ್ಮದಿನದಂದೊ, ರಾಜೀವ್‌ ಗಾಂಧಿ ಅವರ ಜನ್ಮದಿನದಂದೊ ಇಂತಹ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಕಾರ್ಯ ಮಾಡುತ್ತಿತ್ತೇ? ಕಾಂಗ್ರೆಸ್‌ನ ಈ ನಡೆ ತೀವ್ರ ಖಂಡನೀಯ. ಈ ನಡೆಯನ್ನು ಭಾರತದ ಪ್ರತಿಯೊಬ್ಬ ನಾಗರಿಕನೂ ಖಂಡಿಸುತ್ತಾನೆ. ಕೂಡಲೇ ಕಾಂಗ್ರೆಸ್‌ ಪಕ್ಷ ಈ ಪ್ರತಿಭಟನೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾನು ನೇತಾಜಿ ಸುಭಾಷ್‌ಚಂದ್ರ ಬೋಸ್‌ ವಿರೋಧಿ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ ಎಂದು ರವಿಕುಮಾರ್ ಹೇಳಿದರು.

ಇದನ್ನೂ ಓದಿ:ಬೆಂಗಳೂರಿನ 300ಕ್ಕೂ ಹೆಚ್ಚು ಜಾಗಗಳಲ್ಲಿ ನಾಳೆ ಕಾಂಗ್ರೆಸ್​ನಿಂದ ಪ್ರತಿಭಟನೆ : ಶಾಸಕ ಎನ್ ಎ ಹ್ಯಾರಿಸ್

ABOUT THE AUTHOR

...view details