ಬೆಂಗಳೂರು: ಮಲಯಾಳಂನ ಖ್ಯಾತ ಥ್ರಿಲ್ಲರ್ ಸಿನಿಮಾ 'ಕೋಲ್ಡ್ ಕೇಸ್'ನ ಕಥಾಹಂದರ ನೆನಪಿಸುವಂತೆ ನಿರ್ಜನ ಪ್ರದೇಶದಲ್ಲಿ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಅಸ್ಥಿಪಂಜರದ ಮೂಲ ಪತ್ತೆಹಚ್ಚುವಲ್ಲಿ ಹುಳಿಮಾವು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್ಮೆಂಟ್ ಒಂದರ ಹಿಂಭಾಗದ ನಿರ್ಜನ ಪ್ರದೇಶದ ಪೊದೆಗಳ ನಡುವೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಸ್ಥಿಪಂಜರ ನೇಪಾಳ ಮೂಲದ ಪುಷ್ಪಾ ದಾಮಿ (22) ಎಂಬ ಮಹಿಳೆಯದ್ದು ಎಂಬುದು ಪತ್ತೆಯಾಗಿದೆ.
ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪತ್ನಿಗಾಗಿ ಹುಡುಕಾಡುತ್ತಿದ್ದ ಪತಿ:ನೇಪಾಳ ಮೂಲದ ಪುಷ್ಪಾ ದಾಮಿ ಹಾಗೂ ಆಕೆಯ ಪತಿ ಅಮರ್ ದಾಮಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. ಪತಿಯ ಮದ್ಯಪಾನದ ಚಟಕ್ಕೆ ಬೇಸತ್ತ ಪುಷ್ಪಾ ನೇಪಾಳಕ್ಕೆ ಹೋಗಲು ಬಯಸಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಗಳಾಗುತ್ತಿದ್ದವು. ಕಳೆದ ಜುಲೈ 8ರಂದು ಗಂಡನ ಮೇಲೆ ಕೋಪಗೊಂಡು ಮನೆಯಿಂದ ತೆರಳಿದ್ದ ಪುಷ್ಪಾ ಪುನಃ ವಾಪಸ್ ಆಗಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್ ದಾಮಿ ಪ್ರಕರಣ ದಾಖಲಿಸಿದ್ದ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಮಾಧ್ಯಮಗಳಿಗೆ ಮಾಹಿತಿ ನೀಡಿ, ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಗ್ಗೆ 9.30- 10ರ ಸುಮಾರಿಗೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಹಿಂದೆ ಪೊದೆಗಳು ತುಂಬಿ ಕಾಡಿನಂತಿರುವ ಜಾಗದಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಅಸ್ತಿಪಂಜರದ ಮೇಲಿದ್ದ ಹಳೇಯ ಚಪ್ಪಲಿ, ಕುತ್ತಿಗೆಯಲ್ಲಿದ್ದ ನೆಕ್ಲೆಸ್ ಹಾಗೂ ಇತರ ಕೆಲವು ವಸ್ತುಗಳ ಅಲ್ಲೆ ಅಕ್ಕಪಕ್ಕದಲ್ಲಿ ಸಿಕ್ಕಿದ್ದವು. ಅಲ್ಲಿ ಹೆಚ್ಚು ಜನರ ಓಡಾಟ ಇಲ್ಲದ ನಿರ್ಜನ ಪ್ರದೇಶವಾಗಿದ್ದ ಕಾರಣ ಆ ವಸ್ತುಗಳ್ನು ಯಾರೂ ಸ್ಪರ್ಶಿಸಿದಂತಿಲ್ಲ.