ಬೆಂಗಳೂರು : ಗುರುತು ಪರಿಚಯ ಇಲ್ಲದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ. ಕೆಲಸದ ನೆಪದಲ್ಲಿ ಬಂದು ಆಶ್ರಯ ನೀಡಿದವರ ಮನೆಗಳಲ್ಲೇ ಕೈಚಳಕ ತೋರಿಸಿದ್ದ ನೇಪಾಳ ಮೂಲದ ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ ಹಾಗೂ ಜಯನಗರ ಠಾಣೆಗಳಿಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನೇತ್ರಾ ಶಾಹಿ, ಲಕ್ಷ್ಮಿ ಸೇಜುವಲ್, ಗೋರಕ್ ಬಹದ್ದೂರ್, ಭೀಮ್ ಬಹದ್ದೂರ್, ಅಂಜಲಿ, ಅಬೇಶ್ ಶಾಹಿ, ಪ್ರಶಾಂತ್, ಪ್ರಕಾಶ್, ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ, ರಮಿತ ಠಾಕೂರ್, ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಎಂದು ಗುರುತಿಸಲಾಗಿದೆ.
ಮಾಲೀಕರು ತಿರುಪತಿಗೆ ತೆರಳಿದಾಗ ಕಳ್ಳತನ : ಜೆ.ಪಿ.ನಗರ 2ನೇ ಹಂತದ ಮನೆಯೊಂದರಲ್ಲಿ ಪ್ರೇಮ್ ಹಾಗೂ ಲಕ್ಷ್ಮಿ ಸೆಜುವಲ್ ದಂಪತಿಯನ್ನು ಮೂರು ತಿಂಗಳ ಹಿಂದೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಫೆಬ್ರವರಿ 28ರಂದು ಮನೆ ಮಾಲೀಕ ದಂಪತಿ ತಿರುಪತಿಗೆ ತೆರಳಿದ್ದಾಗ ಮನೆಯಲ್ಲಿದ್ದ ಅವರ ಮಗ ಕಿರಣ್ಗೆ ಗೊತ್ತಾಗದಂತೆ ನಿದ್ರೆ ಮಾತ್ರೆ ಸೇವಿಸುವಂತೆ ಮಾಡಿದ್ದಾರೆ. ಬಳಿಕ ರಾತ್ರಿ ವೇಳೆ ತಮ್ಮ ಸಹಚರರಾದ ನೇತ್ರಾ ಶಾಹಿ, ಗೋರಕ್ ಬಹದ್ದೂರ್, ಭೀಮ್ ಬಹದ್ದೂರ್, ಅಂಜಲಿ, ಅಬೇಶ್ ಶಾಹಿ, ಪ್ರಶಾಂತ್, ಪ್ರಕಾಶ್ ನನ್ನು ಮನೆಗೆ ಕರೆಯಿಸಿಕೊಂಡಿದ್ದರು. ನಂತರ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು.
ಮಧ್ಯರಾತ್ರಿ ವೇಳೆ ಎಚ್ಚರಗೊಂಡ ಕಿರಣ್ಗೆ ತನ್ನ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಜೆ.ಪಿ.ನಗರ ಠಾಣಾ ಪೊಲೀಸರು, ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ನೇಪಾಳದ ಗಡಿ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆ.ಜಿ 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ, 77.69 ಲಕ್ಷ ನಗದು, 1 ಪರವಾನಗಿ ಹೊಂದಿರುವ ಪಿಸ್ತೂಲ್, 3 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.